ನಿಟ್ಟೆ: ‘ಮಾನವ ಜನಾಂಗವು ರಕ್ತ ಹಾಗೂ ಜೀವದ ಮಹತ್ವವನ್ನರಿತು ರಕ್ತದಾನವೆಂಬ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳಬೇಕು’ ಎಂದು ಲಯನ್ಸ್ ಜಿಲ್ಲೆ ೩೧೭ ಸಿ ಯ ಜಿಲ್ಲಾ ರಕ್ತದಾನ ಸಂಯೋಜಕ ಲಯನ್ ಆನಂದ ಗಾಣಿಗ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ರೆಡ್‌ಕ್ರಾಸ್ ಸೊಸೈಟಿ, ೬ (ಕೆ.ಎ.ಆರ್) ನೇವಿ ಎನ್.ಸಿ.ಸಿ ಸಬ್‌ಯುನಿಟ್ ನಿಟ್ಟೆ, ಮೆಕ್ಯಾನಿಕಲ್ ವಿಭಾಗದ ಏಐಎಂಎಸ್ ಘಟಕ, ರೋಟರಿಕ್ಲಬ್ ನಿಟ್ಟೆ, ಲಯನ್ಸ್ ಕ್ಲಬ್ ಹಿರಿಯಡ್ಕ, ಲಯನ್ಸ್ ಕ್ಲಬ್ ಬಪ್ಪನಾಡು, ಹೆಚ್.ಡಿ.ಎಫ್.ಸಿ ಬ್ಯಾಂಕ್, ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ನಿಟ್ಟೆ ಗಾಜ್ರಿಯಾ ಆಸ್ಪತ್ರೆ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನ.೮ ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
‘ನಿಟ್ಟೆ ತಾಂತ್ರಿಕ ಕಾಲೇಜಿನ ಈ ಯೋಜನೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿರುವುದು ಶ್ಲಾಘನೀಯ. ಇಂತಹ ಶಿಬಿರಗಳು ಸಮಾಜದ ಆರೋಗ್ಯದತ್ತ ಗಮನ ಹರಿಸುವುದರ ಜೊತೆಗೆ ಯುವಕರಲ್ಲಿ ಸೇವಾ ಮನೋಭಾವ ಬೆಳೆಸಲು ಸಹಕಾರಿಯಾಗಿವೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ರಕ್ತದಾನ ಶಿಬಿರವು ಒಂದು ಉತ್ತಮ ಯೋಜನೆಯಾಗಿದ್ದು ಇದಕ್ಕೆ ವಿದ್ಯಾರ್ಥಿಗಳ ಬೆಂಬಲ ಅಗತ್ಯ. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಸಂಘಸಂಸ್ಥೆಗಳು ಹಾಗೂ ನಿಟ್ಟೆ ಸಂಸ್ಥೆಯ ೨ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳ ಹಾಗೂ ಕಾಲೇಜಿನ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ. ಕಾಲೇಜಿನಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ರಕ್ತದಾನ ಶಿಬಿರವನ್ನು ವರ್ಷಕ್ಕೆ ಎರಡು ಬಾರಿ ನಡೆಸುವ ಬಗ್ಗೆ ಆಶಯವಿದೆ’ ಎಂದರು.
ನಿಟ್ಟೆ ಕ್ಯಾಂಪಸ್ ನ ನಿರ್ವಹಣೆ ಹಾಗೂ ಅಭಿವೃದ್ದಿ ವಿಭಾಗದ ನಿರ್ದೇಶಕ ಯೋಗೀಶ್ ಹೆಗ್ಡೆ, ನಿಟ್ಟೆ ರೋಟರಿ ಕ್ಲಬ್‌ನ ಅಧ್ಯಕ್ಷ ಸತೀಶ್ ಕುಮಾರ್ ಕೆ, ಹಿರಿಯಡ್ಕ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧೀರ್ ಹೆಗ್ಡೆ, ಬಪ್ಪನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್, ಎಚ್.ಡಿ.ಎಫ್.ಸಿ ಬ್ಯಾಂಕ್ ಅಧಿಕಾರಿ ಹಿತೇಶ್, ನಿಟ್ಟೆ ರೆಡ್‌ಕ್ರಾಸ್‌ನ ಮುಖ್ಯಸ್ಥ ಡಾ.ಜನಾರ್ದನ್ ನಾಯಕ್, ಎನ್.ಸಿ.ಸಿ ಆಫೀಸರ್ ಡಾ.ಶಿವಪ್ರಸಾದ್ ಶೆಟ್ಟಿ, ಏಐಎಂಎಸ್ ಸಂಯೋಜಕ ಡಾ.ಗ್ರೈನಲ್, ಎನ್.ಎಸ್.ಎಸ್ ಅಧಿಕಾರಿ ಶ್ರೀನಿವಾಸ ನೆಕ್ಕಾರ್, ಕೆ.ಎಸ್ ಹೆಗ್ಡೆ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ವರ್ಷಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರಾವ್ಯಾ ಶೆಟ್ಟಿ ವಂದಿಸಿದರು. ವಿದ್ಯಾರ್ಥಿ ಅಖಿಲ್ ಕಾರ್ಯಕ್ರಮ ನಿರೂಪಿಸಿದರು. ಈ ಒಂದು ದಿನದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕ ಹಾಗೂ ಭೋದಕೇತರ ವರ್ಗದವರ ರಕ್ತದಾನದೊಂದಿಗೆ ೪೮೫ ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಕಾಲೇಜಿನ ಪತ್ರಿಕಾಪ್ರಕಟಣೆಯಲ್ಲಿ ಪ್ರಾಂಶುಪಾಲರು ತಿಳಿಸಿದ್ದಾರೆ.