ಮಂಗಳೂರು : 1999 ರಲ್ಲಿ ಜಿಲ್ಲೆಯ ಪ್ರಪ್ರಥಮ ತುಳುವಾಹಿನಿ ನಮ್ಮಕುಡ್ಲ ಸ್ಥಾಪನೆಯಾಗಿ ತುಳುನಾಡಿನ ಕಲೆ, ಇತಿಹಾಸ, ಸಂಸ್ಕೃತಿ, ಹಾಗೂ ಜನಜೀವನಕ್ಕೆ ಒತ್ತುಕೊಡುವ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಕೇಬಲ್ ಟಿವಿ, ಅಂತರ್ ಜಾಲದ ಮೂಲಕ ಪ್ರಸಾರ ಮಾಡುತ್ತಿದೆ.
ನಾಡಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಕ್ಷೇತ್ರಗಳ ಬ್ರಹ್ಮಕಲಶ, ವಾರ್ಷಿಕ ಜಾತ್ರೆ, ಇಗರ್ಜಿ ಮತ್ತು ಮಸೀದಿಗಳ ಕಾರ್ಯಕ್ರಮಗಳಲ್ಲದೇ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ನೇರಪ್ರಸಾರ, ಸಮ್ಮೇಳನಗಳು,ಆಳ್ವಾಸ್ ನುಡಿಸಿರಿ ಮತ್ತು ವಿರಾಸತ್, ಮಂಗಳೂರು ದಸರಾ ಹಾಗೂ ಕೋವಿಡ್ ಸಂದರ್ಭದಲ್ಲೂ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿದ್ದು ವಾಹಿನಿಯ ಸಾಧನೆಗೆ ಮುಕುಟಪ್ರಾಯವಾಗಿದೆ.
ದೀಪಾವಳಿಯ ಸಂದರ್ಭದಲ್ಲಿ ಅನಾದಿಕಾಲದಿಂದಲೂ ತುಳುನಾಡಿನ ಜನರು ಮನೆಮನೆಗಳಲ್ಲಿ ರಚಿಸಿ ಬೆಳಗುತ್ತಿರುವ ಗೂಡುದೀಪಗಳು ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮಕುಡ್ಲ ವಾಹಿನಿಯು ಗೂಡುದೀಪ ರಚನೆಗೆ ವಿಶೇಷ ಪ್ರಾಶಸ್ತ್ಯವನ್ನು ನೀಡುವುದರ ಜೊತೆಗೆ ಸ್ಪರ್ಧೆಯನ್ನು ಆರಂಭಿಸುವ ಮೂಲಕ ಜನಮಾನಸದಲ್ಲಿ ಗೂಡುದೀಪಗಳನ್ನು ಮತ್ತೆ ಬೆಳಕಿಗೆ ತರುವ ಪ್ರಯತ್ನವೇ “ನಮ್ಮಕುಡ್ಲ ಗೂಡುದೀಪ ಸ್ಪರ್ಧೆ”.
ಪ್ರಥಮ ವರ್ಷದಿಂದಲೇ ಬಂಗಾರದ ಪದಕವನ್ನು ಬಹುಮಾನ ರೂಪದಲ್ಲಿ ನೀಡಿ ಸ್ಪರ್ಧಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ಬೆಳೆಸುವಲ್ಲಿ ಯಶಸ್ವಿಯನ್ನು ಪಡೆದಿದೆ. ಈ ವರ್ಷದ ಗೂಡುದೀಪ ಸ್ಪರ್ಧೆ ಅಕ್ಟೋಬರ್ ತಿಂಗಳ 30ನೇ ತಾರೀಕಿಗೆ ಮಂಗಳೂರಿನ ವಿಶ್ವವಿಖ್ಯಾತ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಕುದ್ರೋಳಿಯಲ್ಲಿ ಜರುಗಲಿದೆ.
ಸ್ಪರ್ಧಾ ವಿಭಾಗಗಳು: ಸ್ಪರ್ಧೆಯು ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ “ಚಿನ್ನದ ಪದಕ” ವನ್ನು , ಹಾಗೂ ತೃತೀಯ ಸ್ಥಾನ ಪಡೆದ ಮೂವರು ವಿಜೇತರಿಗೆ ಬೆಳ್ಳಿಯ ಪದಕ ಹಾಗೂ 50 ಪ್ರೋತ್ಸಾಹಕ ಬಹುಮಾನಗಳಿವೆ. ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ನೆನಪಿನ ಕಾಣಿಕೆಯ ಜೊತೆಗೆ ಸಿಹಿತಿಂಡಿಯ ಪೊಟ್ಟಣ ಹಾಗೂ ಶ್ರೀಕ್ಷೇತ್ರದ ಪ್ರಸಾದ ನೀಡಿ ಗೌರವಿಸಲಾಗುವುದು.
ಕೇಂದ್ರದ ಮಾಜಿ ಮಂತ್ರಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಅಭಿವೃದ್ದಿಯ ರೂವಾರಿ ಶ್ರೀ ಬಿ ಜನಾರ್ಧನ ಪೂಜಾರಿಯವರ ಸತತ ಪ್ರೋತ್ಸಾಹ ಹಾಗೂ ಕ್ಷೇತ್ರದ ಆಡಳಿತ ಮಂಡಳಿಯವರ ಸಹಕಾರ ನಮ್ಮಕುಡ್ಲ ಗೂಡುದೀಪ ಸ್ಪರ್ಧೆಗೆ ಮತ್ತಷ್ಟು ಸ್ಪೂರ್ತಿ ನೀಡಿದೆ. ಮತ್ತಿತರ ಮಾಹಿತಿಯನ್ನ ಸಂಘಟಕರಾದ ನವನೀತ್ ಶೆಟ್ಟಿ ಮಾಹಿತಿಯನ್ನ ನೀಡಿದರು