ಮಂಡ್ಯ : ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 46 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ನಾಗಮಂಗಲ ಪಟ್ಟಣದಲ್ಲಿ ಕಳೆದ ರಾತ್ರಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಕೆಲ ಮುಸ್ಲಿಂ ವ್ಯಕ್ತಿಗಳು ಗಣಪತಿ ಮೂರ್ತಿ ಮೇಲೆ ಕಲ್ಲು ಹಾಗೂ ಚಪ್ಪಲಿ ತೂರಿದ್ದಾರೆ ಅಂತ ಹೇಳಲಾಗುತ್ತಿದೆ. ಇದೇ ವೇಳೆ ಕೆಲ ಅಂಗಡಿಗಳಿಗೂ ಬೆಂಕಿ ಹಚ್ಚಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
13 ಅಂಗಡಿಗಳಿಗೆ ಹಾನಿ
ಕಿಡಿಗೇಡಿಗಳು 6 ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು, 13 ಸಣ್ಣಪುಟ್ಟ ಅಂಗಡಿಗಳು ದ್ವಂಸವಾಗಿವೆ. ಕಿಡಿಗೇಡಿಗಳು ಸಿಕ್ಕ ಸಿಕ್ಕ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು, ಪಾತ್ರೆ ಅಂಗಡಿ, ಬಳೆ ಅಂಗಡಿ ಸೇರಿದಂತೆ 13 ಅಂಗಡಿ ಮುಂಗಟ್ಟುಗಳು ಸುಟ್ಟು ಕರಕಲಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಪ್ಯಾನ್ಸಿ ಐಟಂಗಳು ಕೂಡ ಭಸ್ಮವಾಗಿದ್ದು ಪಟ್ಟಣ ಭೂದಿ ಮುಚ್ಚಿದ ಕೆಂಡದಂತಿದೆ.
ತಡರಾತ್ರಿ ಕೋಮು ಗಲಭೆ ನಡೆಸ ನಾಗಮಂಗಲ ಪಟ್ಟಣ ಸಹಜ ಸ್ಥಿತಿಗೆ ಮರಳಿದೆ ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಹೇಳಿದ್ದಾರೆ. ಕೆಲ ಕಿಡಿಗೇಡಿಗಳು ರಾತ್ರಿ ಕಲ್ಲು ತೂರಾಟ ನಡೆಸಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 46 ಮಂದಿಯನ್ನ ವಶಕ್ಕೆ ಪಡೆದಿದ್ದೇವೆ. ಪೆಟ್ರೋಲ್ ಬಾಂಬ್ ಬಳಕೆ, ತಲ್ವಾರ್ ಪ್ರದರ್ಶನದ ಬಗ್ಗೆ ತನಿಖೆಯಿಂದ ತಿಳಿಯಲಿದೆ. ಸದ್ಯ ನಾಗಮಂಗಲದಲ್ಲಿ ನಿಷೇಧಾಜ್ಞೆ ಮುಂದುವರೆಯಲಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.