ಕೆ.ಎಂ.ದೊಡ್ಡಿ: ಇ ಖಾತಾ ಮಾಡಿಕೊಡಲು ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ನಡೆಸಿದ ದಾಳಿಗೆ ಗ್ರಾಪಂ ಪ್ರಭಾರ ಪಿಡಿಓ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಪ್ರಭಾರ ಪಿಡಿಓ ದಯಾನಂದ್ ಇ ಖಾತಾ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದವನು. ಈತ ಖಾತೆ ಮಾಡಿಕೊಡುವ ಸಂಬಂಧ ಹನುಮಂತನಗರದ ಅಶ್ವತ್ ಎಂಬುವವರಿಂದ 25ಸಾವಿರ ರೂ.ಲಂಚ ಕೇಳಿದ್ದರು ಎನ್ನಲಾಗಿದೆ. ಅದರಂತೆ ಈಗಾಗಲೇ 13ಸಾವಿರ ರೂ ಆನ್ಲೈನ್ ನಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಅಶ್ವಥ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ನಡುವೆ ಉಳಿದ ಹಣವನ್ನು ಸೋಮವಾರ ರಾತ್ರಿ ಹನುಮಂತನಗರದ ರಸ್ತೆ ಬದಿಯಲ್ಲಿ ನೀಡುವಂತೆ ಸೂಚಿಸಿದ್ದು ಅದಂತೆ 8ಸಾವಿರ ನಗದು ಪಡೆಯುವ ವೇಳೆ ಲೋಕಾಯುಕ್ತರು ದಾಳಿ ನಡೆಸಿ ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ ಪೆಕ್ಟರ್ ಜಯರತ್ನ, ಸಿಬ್ಬಂದಿ ಶರತ್, ಶಂಕರ್, ದಿನೇಶ್, ಯೋಗೇಶ್, ನವೀನ್, ರಾಮನಿಂಗು ಭಾಗವಹಿಸಿದ್ದರು.