ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದಿದ್ದ ಕೋಮುಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 55 ಆರೋಪಿಗಳಿಗೆ ಮಂಡ್ಯ 1ನೇ ಜಿಲ್ಲಾ & ಸೆಷನ್ಸ್ ಕೋರ್ಟ್ನಿಂದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ನಾಳೆ, ನಾಡಿದ್ದು ರಜೆ ಹಿನ್ನೆಲೆ ಸೋಮವಾರ ಬಿಡುಗಡೆ ಮಾಡಲಿದ್ದಾರೆ. ಸೆಪ್ಟೆಂಬರ್ 11ರಂದು ಆರೋಪಿಗಳನ್ನು ಬಂಧಿಸಲಾಗಿತ್ತು.
ಗಣೇಶನ ಮೂರ್ತಿ ವಿಸರ್ಜನೆ ವೇಳೆ ಕೋಮುಗಲಭೆ ಆರಂಭಗೊಂಡು ಜಿಲ್ಲೆಯ ನಾಗಮಂಗಲ ಹೊತ್ತಿ ಉರಿದಿತ್ತು. ಕಿಡಿಗೇಡಿಗಳು ಕಂಡಕಂಡಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದರು. ಇಡೀ ಪ್ರಕರಣದ ಕೇಂದ್ರಬಿಂದು ಬದ್ರಿಕೊಪ್ಪಲು ಗ್ರಾಮ ಅಕ್ಷರಸಹಃ ಸ್ಮಶಾನ ಮೌನವಾಗಿತ್ತು. ಬಂಧನ ಭೀತಿಯಲ್ಲಿ ಹಲವು ಯುವಕರು ಗ್ರಾಮವನ್ನ ತೊರೆದಿದ್ದರು.
ಘಟನೆಯಲ್ಲಿ ನಾಗಮಂಗಲ ಪಟ್ಟಣದಾದ್ಯಂತ 26 ಅಂಗಡಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಲಾಗಿತ್ತು. ಅದರಲ್ಲಿ 1 ಕೋಟಿ 47 ಲಕ್ಷ ರೂ. ಮೌಲ್ಯದ ಕಟ್ಟಡವಾಗಿದ್ದರೇ, 1 ಕೋಟಿ 18 ಲಕ್ಷ ರೂ. ಮೌಲ್ಯದ ಸರಕು ಬೆಂಕಿಗೆ ಆಹುತಿಯಾಗಿದ್ದವು. ಇನ್ನೂ ವರದಿ ತಯಾರು ಮಾಡಲು ಎಸಿ ನೇತೃತ್ವದಲ್ಲಿ ಏಳು ಅಧಿಕಾರ ತಂಡ ರಚನೆ ಮಾಡಲಾಗಿತ್ತು. ಈ ನಡುವೆ ಎಫ್ಐಆರ್ನಲ್ಲಿ 4.5 ಕೋಟಿ ರೂ. ನಷ್ಟದ ಬಗ್ಗೆ ಉಲ್ಲೇಖ ಮಾಡಿರುವುದು ಕಂಡು ಬಂದಿತ್ತು.