ಮಂಡ್ಯ: ಇಲ್ಲಿನ ಹೊಳಲು ಗ್ರಾಮದ ಶ್ರೀ ತಾಂಡವೇಶ್ವರ ದೇವಸ್ಥಾನದಲ್ಲಿ ಎರಡನೇ ಕಾರ್ತಿಕ ಸೋಮವಾರ ಪ್ರಯುಕ್ತ ಶ್ರೀ ತಾಂಡವೇಶ್ವರಸ್ವಾಮಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ಬೆಳಗ್ಗೆಯಿಂದ ಕ್ಷೀರಾಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ ದೇವಸ್ಥಾನದ ಒಳಗಡೆ ಶ್ರೀಪಾರ್ವತಿ ದೇವಿ, ನಾಗರಕಲ್ಲು, ಶ್ರೀಲಕ್ಷ್ಮಿವೆಂಕಟೇಶ್ವರ ದೇವರುಗಳಿಗೆ ವಿಶೇಷ ಪೂಜೆಯನ್ನ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ದೇವಸ್ಥಾನದ ಅರ್ಚಕರಾದ ವಿಶ್ವನಾಥ್ ದೀಕ್ಷಿತ್ ರವರು ಕರ್ನಾಟಕದಲ್ಲಿ ಶ್ರೀ ತಾಂಡವಶ್ವರ ಸ್ವಾಮಿಯ ದೇವಸ್ಥಾನ ಹೊಳಲು ಗ್ರಾಮದಲ್ಲಿ ಇರುವುದು ವಿಶೇಷವಾಗಿದೆ. ರಾಜ್ಯದ ಬೇರೆಯ ಜಿಲ್ಲೆಗಳಿಂದ ಹಾಗೂ ದೂರದ ಊರಿಂದ ಬಂದು ಪೂಜೆ ನೆರವೇರಿಸಿಕೊಂಡು ಹೋಗುತ್ತಾರೆ. ಆದ್ದರಿಂದ ಈ ದಿನ ಎಲ್ಲರೂ ಪೂಜೆಯನ್ನು ಮಾಡಿದರೆ ಅವರ ಕುಟುಂಬಕ್ಕೆ ಹಾಗೂ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ನಂತರ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷರಾದ ಎಚ್. ಎಲ್ .ಶಿವಣ್ಣ ಹಾಗೂ ಕುಟುಂಬದ ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. ಬಳಿಕ ಮಾತನಾಡಿದ ಶಿವಣ್ಣನವರು ಕಾರ್ತಿಕ ಸೋಮವಾರದ ಪ್ರಯುಕ್ತ ನಮ್ಮ ಕುಟುಂಬದ ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ನೆರವೇರಿಸಿದ್ದೇವೆ. ಆದ್ದರಿಂದ ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕು ತಮ್ಮ ಈ ಅಳಿಲು ಸೇವೆಯಿಂದ ದೇವರು ಎಲ್ಲರಿಗೂ ಒಳ್ಳೆಯದು ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಹೆಚ್. ಬಿ. ರಾಮು, ಹರಿಪ್ರಸಾದ್, ತಾಂಡವೇಶ್, ಶ್ರೀಧರ್, ಜಟ್ಟಿ ಕುಮಾರ್, ಪುಟ್ಟಸ್ವಾಮಿ, ಶ್ರೀ ತಾಂಡವಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಚ್ .ಎಸ್ .ಮೋಹನ್ ಕುಮಾರ್, ಉಪಾಧ್ಯಕ್ಷರಾದ ಹೆಚ್. ಬಿ.ದೊಡ್ಡೇಗೌಡ, ಕಾರ್ಯದರ್ಶಿ ಎಸ್. ಕೃಷ್ಣ, ಹಾಗೂ ಸದಸ್ಯರುಗಳಾದ ಚಿಕ್ಕೇಗೌಡ , ಶಿವಣ್ಣ , ಶಿವಲಿಂಗಯ್ಯ, ಅನುಸೂಯ, ದೇವಸ್ಥಾನದ ಅರ್ಚಕರಾದ ಪ್ರದೀಪ್ ದೀಕ್ಷಿತ್, ಮನು ದೀಕ್ಷಿತ್ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು