ಮಂಡ್ಯ: ರಸ್ತೆ ಕಾಮಗಾರಿಗೆ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಹರಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಭಾರತೀನಗರ ಸಮೀಪದ ಕರಡ ಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರೈತ ನಿಂಗೇಗೌಡ (55 ) ಮೃತಪಟ್ಟ ದುರ್ದೈವಿ. ಈತ ಜಾನುವಾರುಗಳಿಗೆ ತನ್ನ ಟಿವಿಎಸ್ ಮೊಪೆಡ್ ನಲ್ಲಿ ಮೇವನ್ನು ತೆಗೆದುಕೊಂಡು ಬಂದು ತನ್ನ ಮನೆಯ ಬಳಿ ಮೊಪೆಡ್ ನಿಲ್ಲಿಸಿ ಮೇವು ಇಳಿಸುವ ಸಂದರ್ಭ ರಸ್ತೆ ಕಾಮಗಾರಿಗೆ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಜಲ್ಲಿಯನ್ನು ಕೆಳಗೆ ಸುರಿಯಲು ಹಿಂಬದಿಗೆ ಚಲಿಸುವಾಗ ಚಾಲಕನ ನಿರ್ಲಕ್ಷ್ಯದಿಂದಾಗಿ ರೈತ ನಿಂಗೇಗೌಡನ ಮೇಲೆ ಹರಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮದ್ದೂರು ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಈ ಅವಘಡಕ್ಕೆ ಚಾಲಕನ ನಿರ್ಲಕ್ಷವೇ ಕಾರಣವಾಗಿದ್ದು, ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಟಿಪ್ಪರ್ ಮಾಲೀಕ ಸ್ಥಳಕ್ಕೆ ಆಗಮಿಸಬೇಕೆಂದು ರೈತ ನಿಂಗೇಗೌಡ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಲ್ಲಿಯವರೆಗೂ ಮೃತದೇಹವನ್ನು ಸ್ಥಳದಿಂದ ತೆರವುಗೊಳಿಸಿದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.