ಮಂಡ್ಯ: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಯಲಿಯೂರು ಬಳಿಯ ಕಾಳೇನಳ್ಳಿ, ವಿಶ್ವೇಶ್ವರಯ್ಯ ನಾಲೆಯಲ್ಲಿ ಶನಿವಾರ ನಡೆದಿದ್ದು, ಶೋಧದ ಬಳಿಕ ಭಾನುವಾರ ಶವ ದೊರೆತಿದೆ.
ಮದ್ದೂರು ತಾಲೂಕು ಸೋಮನಹಳ್ಳಿ ಗ್ರಾಮದ ಯಶ್ವಂತ್(22) ಸಾವನ್ನಪ್ಪಿದ ದುರ್ದೈವಿ. ಈತ ಮಂಡ್ಯ ಸಮೀಪ ಸಿದ್ದಯ್ಯನ ಕೊಪ್ಪಲು ಬಳಿ ಇರುವ ಕಾವೇರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಆಕಸ್ಮಿಕವಾಗಿ ಯಲಿಯೂರು ಬಳಿಯ ಕಾಳೇನಳ್ಳಿ, ವಿಶ್ವೇಶ್ವರಯ್ಯ ನಾಲೆಯಲ್ಲಿ ಜಾರಿ ಕೊಚ್ಚಿಕೊಂಡು ಹೋಗಿದ್ದನು. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಹಾಗೂ ಹಾಗೂ ಸಾರ್ವಜನಿಕರ ಜೊತೆಗೂಡಿ ಶೋಧ ನಡೆಸಿದ್ದರು ಆದರೆ ರಾತ್ರಿಯಾಗಿದ್ದರಿಂದ ಸ್ಥಗಿತಗೊಳಿಸಲಾಗಿತ್ತು.
ಭಾನುವಾರ ಬೆಳಿಗ್ಗೆ ಮತ್ತೆ ಸಾರ್ವಜನಿಕರು ಹಾಗೂ ಸಂಬಂಧಿಕರು ಜೊತೆಗೂಡಿ, ಕಾಳೇನಳ್ಳಿ ಬಳಿಯ ನಾಲೆ ಹಾಗೂ ಪಿ.ಹಳ್ಳಿಯ ನಾಲೆಯ ಬಳಿ ಶೋಧಕಾರ್ಯ ಆರಂಭಿಸಿದ್ದರು. ಈ ನಡುವೆ ಸ್ಥಳೀಯ ರೈತರು ಬಟ್ಟೆ ಇಲ್ಲದ ಒಂದು ಯುವಕನ ದೇಹ ತೇಲಿ ಹೋಗುತ್ತಿದೆ ಎಂದು ಮಾಹಿತಿ ನೀಡಿದ್ದು, ತಕ್ಷಣ ಪಿ. ಹಳ್ಳಿ ಬಳಿ ಸಂಬಂಧಿಕರು ಸ್ನೇಹಿತರು ತೆರಳಿದ್ದರಾದರೂ ಅದಾಗಲೇ ಮೃತದೇಹ ತೇಲುತ್ತಾ ಮುಂದೆ ಸಾಗಿತ್ತು.
ಇದೇ ಸಮಯಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಕಾಳೇನಳ್ಳಿ ವಿಶ್ವನಾಥ್ ಎಂಬ ಈಜು ಪರಿಣಿತರೊಬ್ಬರ ಸಹಾಯದಿಂದ ಲಾಳನ್ಕೆರೆ ಬಳಿ ಶವವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ