ಮಂಡ್ಯ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ, ಸ್ಕ್ಯಾನಿಂಗ್ ಸೆಂಟರ್ ಹಾಗೂ ಮೆಡಿಕಲ್ ಸ್ಟೋರ್ ಗಳ ಮೇಲೆ ತೀವ್ರ ನಿಗಾ ಇಟ್ಟು ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ (ದುರ್ಬಳಕೆ ಮತ್ತು ತಡೆ) ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆ ಹಾಗೂ ಜಿಲ್ಲಾ ತಪಾಸಣಾ ಮೇಲ್ವಿಚಾರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ ಭ್ರೂಣಹತ್ಯೆಗೆ ಸಂಬಂಧಿಸಿದಂತೆ ದಾಳಿ ನಡೆಸಿದಾಗ ಸ್ಕಾನಿಂಗ್ ಸೆಂಟರ್ ಗಳಲ್ಲಿ ಹೆಚ್ಚುವರಿ ಸ್ಕಾನಿಂಗ್ ಯಂತ್ರಗಳು ಇರುವುದು ಕಂಡುಬಂದಿದ್ದು, ಹೆಚ್ಚುವರಿ ಸ್ಕ್ಯಾನಿಂಗ್ ಯಂತ್ರಗಳನ್ನು ವಶಪಡಿಸಿಕೊಂಡು ಸ್ಕ್ಯಾನಿಂಗ್ ಸೆಂಟರ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಹೆಣ್ಣು ಭ್ರೂಣಪತ್ತೆ ಮಾಡುತ್ತಿದ್ದ ಹಾಗೂ ಅಕ್ರಮ ಗರ್ಭಪಾತ ನಡೆಸುತ್ತಿದ್ದ ಒಟ್ಟು 37 ಜನರ ಮೇಲೆ ಪ್ರಕರಣ ದಾಖಲಾಗಿದೆ. ಇವರಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ಜನರು ಈ ರೀತಿಯ ಕೃತ್ಯಕ್ಕೆ ಮುಂದಾಗುವುದಿಲ್ಲ. ಜಿಲ್ಲೆಯಲ್ಲಿ ಯಾವುದೇ ಭ್ರೂಣ ಹತ್ಯೆ ಮತ್ತು ಭ್ರೂಣ ಪತ್ತೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಪಿ ಸಿ ಹಾಗೂ ಪಿ ಎನ್ ಡಿ ಟಿ ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗಿ ಎಂದರು.
ವೈದ್ಯರ ಸಲಹೆ ಇಲ್ಲದೆ ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗುವ ಮಾತ್ರೆಗಳನ್ನು ಖರೀದಿಸಿ ಅಕ್ರಮ ಗರ್ಭಪಾತ ನಡೆಯುತ್ತಿವೆ ಎಂಬ ದೂರು ಕೇಳಿ ಬರುತ್ತಿದೆ. ಎಲ್ಲಾ ಮೆಡಿಕಲ್ ಸ್ಟೋರ್ ಗಳ ಮೇಲೆ ತೀವ್ರ ನಿಗಾ ಇಟ್ಟು ಪರಿಶೀಲನೆ ನಡೆಸಿ ಔಷಧಿ ಮಾರಾಟಗಾರರಿಗೆ ಸೂಕ್ತ ಕಾರ್ಯಾಗಾರವನ್ನು ಏರ್ಪಡಿಸಿ ತಿಳುವಳಿಕೆ ಮೂಡಿಸುವಂತೆ ತಿಳಿಸಿದರು.
ಪ್ರತಿ ಸ್ಕಾನಿಂಗ್ ಸೆಂಟರ್ ಗಳಿಗೆ ಧಿಡೀರ್ ಭೇಟಿ ನೀಡಿ ತಪಾಸಣೆ ಮಾಡಬೇಕು ಹಾಗೂ ಯಾವುದೇ ರೀತಿಯ ಅನುಮಾನ ಬಂದಲ್ಲಿ ಅವರ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಿ. ಭ್ರೂಣ ಹತ್ಯೆ ತಡೆಗಟ್ಟುವ ಬಗ್ಗೆ ಪ್ರತಿ ಗ್ರಾಮ ಸಭೆಗಳಲ್ಲಿ ಚರ್ಚೆ ನಡೆಸಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು. ಡಿಸೆಂಬರ್ 20, 21, 22 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ವಿಶೇಷ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 59 ಸ್ಕಾನಿಂಗ್ ಸೆಂಟರ್ ಗಳಿವೆ. ಮಂಡ್ಯ ತಾಲ್ಲೂಕಿನಲ್ಲಿ- 27, ಮದ್ದೂರು – 6, ಮಳವಳ್ಳಿ -7, ಪಾಂಡವಪುರ -5, ಶ್ರೀರಂಗಪಟ್ಟಣ -3, ಕೆ ಆರ್ ಪೇಟೆ -6, ನಾಗಮಂಗಲ ತಾಲ್ಲೂಕಿನಲ್ಲಿ – 5 ಸ್ಕಾನಿಂಗ್ ಸೆಂಟರ್ ಗಳಿವೆ. ಪ್ರತಿ 3 ತಿಂಗಳಿಗೊಮ್ಮೆ ಸ್ಕಾನಿಂಗ್ ಸೆಂಟರ್ ಗಳ ಮೇಲೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್, ಜಿಲ್ಲಾ ಹಿರಿಯ ನಾಗರೀಕರ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ಸ್ತ್ರೀ ರೋಗ ತಜ್ಞರು ಡಾ ಜ್ಯೋತಿ, ಡಾ ಮನೋಹರ್, ನಿವೃತ್ತ ಡಿಹೆಚ್ ಒ ಡಾ ಮರೀಗೌಡ, ಮುಖಂಡರುಗಳಾದ ಜಯಲಕ್ಷ್ಮಿ, ಜನಾರ್ಧನ್, ಡಾ ದೇವಿಕಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.