News Karnataka Kannada
Monday, April 29 2024
ಶಿವಮೊಗ್ಗ

ಗ್ರಾಮ ಪಂಚಾಯತ್‍ಗಳಿಗೆ ಕೆರೆ ಕುಂಟೆಗಳ ಅಭಿವೃದ್ಧಿ ಜವಾಬ್ದಾರಿ: ಸಚಿವ ಕೆ.ಎಸ್.ಈಶ್ವರಪ್ಪ

Minister Ishwarappa
Photo Credit :

ಶಿವಮೊಗ್ಗ: ಗ್ರಾಮ ಪಂಚಾಯತ್‍ಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ತಮ್ಮ ವ್ಯಾಪ್ತಿಯಲ್ಲಿರುವ ಕೆರೆ ಕುಂಟೆಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್‍ಗಳಿಗೆ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಸೋಮವಾರ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯತ್‍ನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಗೆ ಕೆರೆ ಕುಂಟೆಗಳ ನಿರ್ವಹಣೆಯನ್ನು ವಹಿಸಿರುವುದರಿಂದ ಜಲಸಂರಕ್ಷಣೆ ಕಾರ್ಯದಲ್ಲಿ ಗ್ರಾಮ ಪಂಚಾಯತ್‍ಗಳು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ. ಸರ್ಕಾರದ ಹಲವು ಯೋಜನೆಗಳ ಅನುಷ್ಟಾನದ ಹೊಣೆ ಗ್ರಾಮ ಪಂಚಾಯತ್‍ಗಳ ಮೇಲಿದ್ದು, ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. ಪ್ರತಿಯೊಂದು ಗ್ರಾಮ ಪಂಚಾಯತ್ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಒತ್ತು ನೀಡುತ್ತಿದ್ದು, ತಮ್ಮ ಗ್ರಾಮಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಪಟ್ಟಿಯನ್ನು ಸಿದ್ಧಪಡಿಸಬೇಕು. ಗ್ರಾಮ ಪಂಚಾಯತ್‍ಗಳಲ್ಲಿ ಯೋಜನೆಗಳ ಅನುಷ್ಟಾನದ ಬಗ್ಗೆ ತರಬೇತಿಯನ್ನು ನೀಡಲು ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಡಿಒಗಳಿಗೆ ತರಬೇತಿಯನ್ನು ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಇದೀಗ 15ದಿನಗಳ ಒಳಗಾಗಿ ಕೂಲಿಯನ್ನು ಪಾವತಿಸಲಾಗುತ್ತಿದೆ. ಕೆಲಸ ಕೇಳಿದ ತಕ್ಷಣ ಕೆಲಸವನ್ನು ನೀಡಲು ಪ್ರತಿ ಗ್ರಾಮ ಪಂಚಾಯತ್‍ನಲ್ಲಿ ವ್ಯವಸ್ಥೆ ಮಾಡಿರಬೇಕು. ಕಳೆದ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿಗದಿಪಡಿಸಲಾಗಿದ್ದ 13 ಕೋಟಿ ಮಾನವ ದಿನಗಳನ್ನು ಡಿಸೆಂಬರ್ ತಿಂಗಳಲ್ಲೇ ಪೂರ್ಣಗೊಳಿಸಿದ ಕಾರಣ ಹೆಚ್ಚುವರಿಯಾಗಿ 2ಕೋಟಿ ಮಾನವ ದಿನವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಇನ್ನು ಮುಂದೆ ಗ್ರಾಮೀಣ ಭಾಗದಲ್ಲಿ ಸಹ ಮನೆಯ ತ್ಯಾಜ್ಯಗಳನ್ನು ತಿಪ್ಪೆಗೆ ಎಸೆಯದೆ, ಕಸ ಸಂಗ್ರಹ ವಾಹನಕ್ಕೆ ನೀಡಿ ಗ್ರಾಮದ ಸ್ವಚ್ಛತೆಗೆ ಕೈಜೋಡಿಸಬೇಕು. ಆದಷ್ಟು ಬೇಗನೇ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಗಮೇಶ್ವರ್ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕುರಿತು ಇನ್ನಷ್ಟು ಅರಿವು ಮೂಡುವ ಅಗತ್ಯವಿದೆ. ಘನತ್ಯಾಜ್ಯ ವಿಲೇವಾರಿ ಘಟಕಗಳ ಸಮರ್ಪಕ ನಿರ್ವಹಣೆಗೆ ಇನ್ನಷ್ಟು ಅನುದಾನ ಒದಗಿಸುವ ಅಗತ್ಯವಿದೆ ಎಂದರು.

ವಿಧಾನಪರಿಷತ್ ಸದಸ್ಯ ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ರಮೇಶ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಘನತ್ಯಾಜ್ಯ ಸಂಗ್ರಹಕ್ಕೆ ಗ್ರಾಮ ಪಂಚಾಯತ್‍ಗೆ ನೀಡಲಾಗಿರುವ ವಾಹನವಕ್ಕೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು