News Karnataka Kannada
Sunday, April 28 2024
ಚಿಕಮಗಳೂರು

35 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ ಪ್ರಕರಣ, ನಗರಸಭೆ ಕಾಂಗ್ರೆಸ್ ಸದಸ್ಯನ ಮೇಲೆ ಪ್ರಕರಣ ದಾಖಲು

Illegal liquor worth Rs 35 lakh seized, case registered against Congress corporator
Photo Credit : News Kannada

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತದಾರರಿಗೆ ಹಂಚಲೆಂದು ದಾಸ್ತಾನು ಮಾಡಲಾಗಿದ್ದ ೩೫ ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಇದು ರಾಜ್ಯದಲ್ಲೇ ದೊಡ್ಡಮಟ್ಟದ ಕಾರ್ಯಾಚರಣೆಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ಲಕ್ಷ್ಮಣ್ ಎಂಬುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಒಟ್ಟು6 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೇ ದಿನದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮೊದಲ ಪ್ರಕರಣದಲ್ಲಿ ನಗರ ಹೊರ ವಲಯದ ಸಾಲುಮರದಮ್ಮ ದೇವಸ್ಥಾನ ಹಿಂಭಾಗದ ಕ್ರಿಶ್ಚಿಯನ್ ಆರಾಧನಾ ಮಂದಿರದಲ್ಲಿ ದಾಸ್ಥಾನಿಡಲಾಗಿದ್ದ ೪೭೫ ಬಾಕ್ಸ್ ರಾಯಲ್ ಬ್ಲ್ಯೂ ವಿಸ್ಕಿಯನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ೨೫ ಲಕ್ಷ ರೂ.ಗಳಾಗಿದ್ದು, ಗೋವಾದಿಂದ ತರಲಾಗಿದೆ.
ಈ ಮದ್ಯ ತಯಾರಿಕರ ಬಗ್ಗೆ ಮಾಹಿತಿ ಕಲೆ ಹಾಕಲು ಅಬಕಾರಿ ಇಲಾಖೆಗೆ ಸೂಚನೆ ನೀಡಲಾಗಿದೆ. ಅವರು ಗೋವಾ ಸರ್ಕಾರವನ್ನು ಸಂಪರ್ಕಿಸಿ ಆ ಹೆಸರಿನ ಬಾಟ್ಲಿಂಗ್ ಕಂಪನಿ ಇದೆಯೋ ಇಲ್ಲವೋ ದೃಢಪಡಿಸಿಕೊಳ್ಳಲಿದ್ದಾರೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತೋಣಿ ರಾಜ ಎಂಬಾತನನ್ನು ಬಂಧಿಸಲಾಗಿದೆ. ಆತ ನೀಡಿದ ಮಾಹಿತಿ ಮೇರೆ ಬೇರೆ ಬೇರೆ ವ್ಯಕ್ತಿಗಳ ಮೇಲೆ ಶಂಕಾಸ್ಪದವಾಗಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯ ಮೊಬೈಲ್ ಸಂಭಾಷಣೆಗಳು, ವಾಟ್ಸ್ ಆಫ್ ಮೆಸೇಜ್‌ಗಳು, ಕಾಲ್ ಡೀಟೇಲ್‌ಗಳನ್ನು ಸಂಗ್ರಹಿಸಲಾಗಿದ್ದು, ಮೇಲ್ನೋಟಕ್ಕೆ ಒಂದು ರಾಜಕೀಯ ಪಕ್ಷಕ್ಕೆ ಸಂಬಂಧವಿರುವುದು ದೃಢಪಟ್ಟಿದೆ ಪ್ರಕರಣವನ್ನು ಖಂಡಿತವಾಗಿ ತಾರ್ಕಿಕ ಹಂತಕ್ಕೆ ಕೊಂಡೊಯ್ಯುತ್ತೇವೆ ಎಂದು ತಿಳಿಸಿದರು.

ವಶಪಡಿಸಿಕೊಳ್ಳಲಾದ ಮದ್ಯದ ಮಾದರಿಯ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ. ಅದರಿಂದ ಮನುಷ್ಯನ ಅಂಗಾಂಗಗಳಿಗೆ ಹಾನಿಕಾರಕವೇ ಎನ್ನುವುದನ್ನು ದೃಢಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಆರೋಪಿ ಕೊಟ್ಟ ಹೇಳಿಕೆ ಮೇರೆಗೆ ಮತ್ತೆರಡು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಸಖರಾಯಪಟ್ಟಣದ ಗ್ರಾ.ಪಂ.ಸದಸ್ಯೆ ರಾಜಮ್ಮ ಮತ್ತು ಅವರ ಮಗ ಮಂಜುನಾಥ್ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿ ೧೦೦ ಬಾಕ್ಸ್ ಅಕ್ರಮ ಮದ್ಯವನ್ನು ವಶಕ್ಕೆಪಡೆಯಲಾಗಿದ್ದು, ಅದೂ ಗೋವಾದ ರಾಯಲ್ ಬ್ಲ್ಯೂ ಬ್ರಾಂಡ್‌ನದ್ದೇ ಆಗಿದೆ ಎಂದರು.

ಇದರ ಬೆಲೆ ೫.೫೦ ಲಕ್ಷ ರೂ.ಗಳಾಗಿದ್ದು, ಸಖರಾಯಪಟ್ಟಣದ ಅಂತರಘಟ್ಟಮ್ಮ ಬೀದಿಯ ಮಂಜುನಾಥ ಎಂಬಾತ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಇದೇ ಆರೋಪಿಗಳ ನೀಡಿದ ಸುಳುವಿನ ಮೇರೆಗೆ ೩ ನೇ ಪ್ರಕರಣ ಪತ್ತೆಹಚ್ಚಲಾಗಿದ್ದು, ಬಿಳೇಕಲ್ಲು ಗ್ರಾಮದಲ್ಲಿ ೪.೬೬ ಲಕ್ಷದ ೯೦ ಅಕ್ರಮ ಮದ್ಯದ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಈ ಪ್ರಕರಣದಲ್ಲೂ ಮಂಜುನಾಥ ಮತ್ತು ನಗರಸಭೆ ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಎಂಬತ ಆರೋಪಿಗಳಾಗಿದ್ದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ನೇತೃತ್ವದಲ್ಲಿ ೩ ತಂಡಗಳು ತನಿಖೆ ನಡೆಸುತ್ತಿವೆ. ಒಂದೆರಡು ದಿನಗಳಲ್ಲಿ ಪೂರ್ತಿ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.

ಸಾರ್ವಜನಿಕ ಆರೋಗ್ಯದ ದೃಷ್ಠಿಯಿಂದ ಈ ಮದ್ಯ ಸೇವನೆ ಅಪಾಯಕಾರಿಯಾಗಿದೆ. ಯಾರಾದರೂ ಈ ರೀತಿ ಅಕ್ರಮ ಮದ್ಯವನ್ನು ತಂದುಕೊಟ್ಟಲ್ಲಿ ಅದನ್ನು ಉಪಯೋಗಿಸದೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು