ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಸಂಖ್ಯೆ 19ರಲ್ಲಿ ಚೈನ್ ಲಿಂಕ್ ತುಂಡಾಗಿರುವ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನೀರಿನ ರಭಸಕ್ಕೆ ತುಂಡಾಗಿರುವ ಭಾಗವೂ ಕಾಣುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ನ ಚೈನ್‌ಲಿಂಕ್ ಶನಿವಾರ ತಡರಾತ್ರಿ 11 ಗಂಟೆ ಸುಮಾರಿಗೆ ತುಂಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
105 ಟಿಎಂಸಿ ಸಾಮರ್ಥ್ಯದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಗೇಟ್ ಸಂಖ್ಯೆ 19 ರಿಂದ 35 ರಿಂದ 45 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಉಳಿದ ಗೇಟ್‌ಗಳಿಂದ ಸುಮಾರು 75 ಸಾವಿರ ಕ್ಯುಸೆಕ್ ನೀರನ್ನ ಹೊರಬಿಡಲಾಗುತ್ತಿದೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ರೆ ಮಾತ್ರವೇ ಗೇಟ್‌ಗೆ ಏನಾಗಿದೆ ಎಂಬುದನ್ನ ನೋಡೋದಕ್ಕೆ ಸಾಧ್ಯ. ಆದ್ದರಿಂದ ನದಿ ಪಾತ್ರದ ಜನರು ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಈಗಾಗಲೇ ಬೆಂಗಳೂರಿನಿಂದ ಹೊರಟಿದ್ದು, ನೀರಿನ ಹೊರಹರಿವಿನ ಪ್ರಮಾಣವನ್ನು 1 ರಿಂದ 2 ಲಕ್ಷ ಕ್ಯುಸೆಕ್‌ಗೆ ಏರಿಸಬೇಕು. ನೀರು ಕಡಿಮೆಯಾದರೆ ಬಳಿಕ ತುಂಡಾದ ಚೈನ್‌ಲಿಂಕ್ ಸರಿಪಡಿಸಲು ಸಾಧ್ಯವಾಗುತ್ತದೆ. ದುರಸ್ತಿಗೆ ಅಗತ್ಯವಾಗಿ ಬೇಕಾದ ನೀರು ಕಡಿಮೆ ಮಾಡಲು ಕನಿಷ್ಠ 3-4 ದಿನವಾದ್ರೂ ಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.