Bengaluru 27°C

ತುಂಗಭದ್ರಾ ಜಲಾಶಯದ ಎಲ್ಲಾ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ

ತುಂಗಭದ್ರಾ ಜಲಾಶಯದಲ್ಲಿ ಮುರಿದಿದ್ದ 19ನೇ ಗೇಟ್‍ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿಯಾಗಿದೆ. ಈ ಮೂಲಕ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ.

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಮುರಿದಿದ್ದ 19ನೇ ಗೇಟ್‍ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿಯಾಗಿದೆ. ಈ ಮೂಲಕ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ.


ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ತಂಡ ಮೂರು ದಿನಗಳಿಂದ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಅ.16 ರಂದು ಮೊದಲ ಎಲಿಮೆಂಟ್ ಅಳವಡಿಸಲಾಗಿತ್ತು. ಇದೀಗ ಶನಿವಾರ ಸಂಜೆ ಎಲ್ಲಾ ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ ಡ್ಯಾಂನಿಂದ ಹೊರ ಹೋಗುತ್ತಿದ್ದ ನೀರು ಬಂದ್ ಆಗಿದೆ.


ಜಲಾಶಯದ ಎಲ್ಲ 33 ಗೇಟ್‍ಗಳನ್ನು ಮುಚ್ಚಲಾಗಿದೆ ಎಂದು ಟಿಬಿ ಡ್ಯಾಂ ಮಂಡಳಿ ತಿಳಿಸಿದೆ. ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ 70 ಟಿಎಂಸಿಯಷ್ಟು ನೀರು ಉಳಿಸಲು ಸಾಧ್ಯವಾಗಿದೆ. ಇನ್ನು ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇದುವರೆಗೆ ಪೋಲಾದ ನೀರು ಮತ್ತೆ ತುಂಬಿಕೊಳ್ಳುವ ವಿಶ್ವಾಸ ಮೂಡಿದೆ. ಸದ್ಯ ಜಲಾಶಯಕ್ಕೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು, ರೈತರ ಬದುಕು ಹಸನುಗೊಳಿಸಲು ನಾನು ಈ ಇಳಿವಯಸ್ಸಿನಲ್ಲೂ ದೂರದ ಹೈದರಾಬಾದ್‍ನಿಂದ ಆಗಮಿಸಿ ಸ್ಟಾಪ್ ಲಾಗ್ ಗೇಟ್ ಅಳವಡಿಸಿರುವೆ. ಹರಿಯುವ ನೀರಿನಲ್ಲೇ ಗೇಟ್ ಅಳವಡಿಕೆ ಸವಾಲಿನ ಕೆಲಸ ಆಗಿತ್ತು. ಆದರೂ ನಮ್ಮ ಮನೆ ದೇವರಾದ ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಯಶಸ್ಸು ಸಾಧಿಸಿದ್ದೇವೆ. ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಟಿಬಿ ಡ್ಯಾಂನ 19ನೇ ಗೇಟ್ ನಲ್ಲಿ ಸ್ಟಾಪ್ ಲಾಗ್ ಅಳವಡಿಸುವ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ. ಸದ್ಯ ಡ್ಯಾಂನಿಂದ ಪೋಲಾಗುತ್ತಿದ್ದ ನೀರನ್ನು ನಿಲ್ಲಿಸುವಲ್ಲಿ ತಂಡ ಯಶಸ್ವಿಯಾಗಿದೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ದುರಸ್ತಿ ಕಾರ್ಯ ಮಾಡಿದ್ದಾರೆ. ಆ ಎಲ್ಲಾ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. 70 ವರ್ಷದ ನಂತರ ಟಿಬಿ ಡ್ಯಾಂನಲ್ಲಿ ಇದೇ ಮೊದಲ ಬಾರಿಗೆ ಗೇಟ್ ತುಂಡಾಗಿದೆ. ಇದರಿಂದ 30ಕ್ಕೂ ಹೆಚ್ಚು ಟಿಎಂಸಿ ನೀರು ಪೋಲಾಗಿತ್ತು.


Nk Channel Final 21 09 2023