ಮಡಿಕೇರಿ: ತೀರಿಸಲು ಸಾಧ್ಯವಾಗದಷ್ಟುನ ಸಾಲ ಮಾಡಿಕೊಂಡು ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಇತ್ತೀಚೆಗಿನ ದಿನಗಳಲ್ಲಿ ಕೇಳಿ ಬರುತ್ತಿರುವುದು ಮಾಮೂಲಿ ಸುದ್ದಿಯಾಗುತ್ತಿದೆ. ಎಷ್ಟೇ ಕ್ರಮ ಕೈಗೊಂಡರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳಿಗೆ ಇತಿತ್ರೀ ಹೇಳುವುದು ಕಷ್ಟವಾಗುತ್ತಲೇ ಸಾಗುತ್ತಿದೆ. ಇದೀಗ ಕೊಡಗಿನಲ್ಲಿ ಸಾಲದ ಬಾಧೆಗೆ ರೈತನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೊಡಗಿನ ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗುತ್ತಿ ಗ್ರಾಮದ ನಿವಾಸಿ ರೈತ ಮಜೀದ್( 45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಜಮೀನು ಹೊಂದಿದ್ದು ಕೃಷಿ ಮಾಡುವ ಸಲುವಾಗಿ ವಿವಿಧ ಬ್ಯಾಂಕುಗಳಿಂದ ಮತ್ತು ಕೈಸಾಲವನ್ನು ಪಡೆದಿದ್ದರು ಎನ್ನಲಾಗಿದೆ. ಆದರೆ ಅಂದುಕೊಂಡಂತೆ ಕೃಷಿ ಅವರ ಕೈಹಿಡಿಯದ ಕಾರಣದಿಂದಾಗಿ ಸಾಲದ ಸುಳಿಗೆ ಸಿಲುಕಿದ್ದರು.
ಈ ನಡುವೆ ಸಾಲಕೊಟ್ಟವರು ಮರಳಿ ನೀಡುವಂತೆ ಒತ್ತಡ ಹೇರುತ್ತಿದ್ದರು. ಇನ್ನೊಂದೆಡೆ ಬ್ಯಾಂಕ್ ನಲ್ಲಿ ಪಡೆದಿದ್ದ ಸಾಲ ಕಟ್ಟುವುದಿರಲಿ, ಬಡ್ಡಿ ಕಟ್ಟಲೂ ಕಷ್ಟವಾಗಿತ್ತು. ಹೀಗಾಗಿ ಬೇರೆ ದಾರಿ ಕಾಣದ ಅವರು ಬುಧವಾರ ಬೆಳಗಿನ ಜಾವ ತಮ್ಮ ಮನೆಯ ಕೋವಿಯಿಂದ ಮನೆಯೊಳಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡಿನ ಶಬ್ದ ಕೇಳಿ ಮನೆಯವರು ಹೆದರಿ ಒಳಗೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ಹಾಸನದ ಅರಕಲಗೋಡು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಮೃತ ಮಜೀದ್ ಗೆ ಪತ್ನಿ ಹಾಗೂ ಒಬ್ಬಳು ಮಗಳು ಹಾಗೂ ಇಬ್ಬರು ಪುತ್ರರಿದ್ದಾರೆ. ಈ ಘಟನೆಯಿಂದ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ವಿವಿಧ ಬ್ಯಾಂಕ್ ಹಾಗೂ ಕೈಸಾಲ ಮಾಡಿಕೊಂಡಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಆತ್ಮಹತ್ಯೆ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.