News Karnataka Kannada
Monday, April 29 2024
ಕರಾವಳಿ

ಪೂಂಜರನ್ನು 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ: ಅಸ್ಸಾಂ ಸಿಎಂ ಬಿಸ್ವಾಸ್ ಕರೆ

Win Poonja by a margin of 60 thousand votes: Assam CM Biswas calls
Photo Credit :

ಬೆಳ್ತಂಗಡಿ: ಕರ್ನಾಟಕದಲ್ಲಿ ಪೂರ್ಣ ಬಹುಮತ ಬರಬೇಕು. ಇದರಿಂದ ಸುಸ್ಥಿರ ಆಡಳಿತ ಮೂಲಕ ಕೋಮುವಾದವನ್ನು ಮಟ್ಟ ಹಾಕಿ ವಿಕಾಸ ಕಾರ್ಯ ಮುಂದುವರಿಸಲು ಸಾಧ್ಯ ಎಂದು ಅಸ್ಸಾಂ ಮುಖ್ಯಮಂತ್ರಿ ಹೀಮಾಂತ್ ಬಿಸ್ವಾಸ್ ಶರ್ಮಾ ಹೇಳಿದರು.
ಅವರು ಶನಿವಾರ ಉಜಿರೆಯಲ್ಲಿ ಬಿಜೆಪಿಯ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದರು.

ಅಸ್ಸಾಂ ಮತ್ತು ಕರ್ನಾಟಕ ಮಧ್ಯೆ ಸರಿಸುಮಾರು 3000 ಕಿ.ಮೀ. ಅಂತರವಿದೆ. ನೀವು ಅಸ್ಸಾಂಗೆ ಬಂದರೂ ಉತ್ತರ ಪ್ರದೇಶಕ್ಕೆ ಹೋದರೂ ಮೋದಿ ಇದ್ದಾರೆ. ಹಾಗೆ ಕರ್ನಾಟಕದಲ್ಲೂ ಇದ್ದಾರೆ. ಇಂದು ಉಜಿರೆ ಬಂದು ನಿಮ್ಮ ಉತ್ಸಾಹ ನೋಡಿ ತುಂಬಾ ಖುಷಿಯಾಯಿತು. ಹರೀಶ ಪೂಂಜ ಅವರು 60 ಸಾವಿರ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಇದರಿಂದ ನನಗೆ ಖಾತ್ರಿಯಾಗಿದೆ.

ನನಗೆ ಧರ್ಮಸ್ಥಳ ನೋಡುವ ಸೌಭಾಗ್ಯ ಸಿಕ್ಕಿತು. ಶ್ರೀ ಮಂಜುನಾಥಸ್ವಾಮಿ ದರ್ಶನ ಮತ್ತು ಹೆಗ್ಗಡೆಯವರ ಭೇಟಿ ಸೌಭಾಗ್ಯ ಸಿಕ್ಕಿದೆ.
ಈ ಬಾರಿ ಕರ್ನಾಟಕದಲ್ಲಿ 150 ಸೀಟು ಸಿಗವಂತಾಗಬೇಕು.ಇಂದು ಬೆಂಗಳೂರಿನಲ್ಲಿ ವಾರಣಾಸಿಗಿಂತಲೂ ದೊಡ್ಡ ಮಟ್ಟದ ರೋಡ್ ಶೋ ಮೊದಿಯವರದ್ದು ನಡೆಯಿತು. ಅದಕ್ಕಾಗಿ ನಾನು ಕರ್ನಾಟಕದ ಜನತೆಗೆ ಧನ್ಯವಾದ ಹೇಳುತ್ತೇನೆ
‌ಇಲ್ಲಿ ಪ್ರತಾಪಸಿಂಹ ಅವರಂತಹ ನಾಯಕರು, ಅನೇಕ‌ ಶಿಕ್ಷಣವೇತ್ತರು ಸೇರಿರುವುದು ಸಂತಸ ತಂದಿದೆ ಎಂದರು.

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಸ್ಸಿ ಎಸ್ಟಿ ಓಬಿಸಿ ಅವರಿಗೆ ಮೀಸಲಾತಿ ನೀಡಬೇಕು. ಆದರೆ ಧರ್ಮಾಧಾರಿತವಾಗಿ ಯಾರಿಗೂ ಮೀಸಲಾತಿ ನೀಡಬಾರದು ಎಂದಿದ್ದರು. ಆದರೆ ಹಿಂದಿನ ಕಾಂಗ್ರೆಸ್ ಸರಕಾರ ಶೇ. 7 ಮೀಸಲಾತಿ ನೀಡಿತ್ತು. ಇದು ಸಂವಿಧಾನ ವಿರೋಧಿಯಾಗಿತ್ತು.‌ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರಕಾರ ಶೇ. 7 ರದ್ದು ಮಾಡಿ ತಲಾ ಶೇ. 2 ಮೀಸಲಾತಿಯನ್ನು ಲಿಂಗಾಯಿತ ಹಾಗೂ ಒಕ್ಕಲಿಗರಿಗೆ ಹಂಚಿದ್ದಲ್ಲದೆ ಶೆಡ್ಯೂಲ್ ಕಾಸ್ಟ್ ಮೀಸಲಾತಿ ಹೆಚ್ಚಿಸಿದ್ದೀರಿ. ಇದಕ್ಕೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

ಪ್ರಿಯಾಂಕಾ ಗಾಂಧಿ ಈಗ ಮುಸಲ್ಮಾನರಿಗಾಗಿ ಅಳುತ್ತಿದ್ದು, ನಾವು ಅಧಿಕಾರಕ್ಕೆ ಬಂದರೆ ಶೆ. 13 ರಷ್ಟು ಮೀಸಲಾತಿ ನೀಡುತ್ತೇವೆ ಎಂದಿದ್ದಾರೆ. ನೀವು ಹತ್ತು ಬಾರಿ ಜನ್ಮ ತಾಳಿದರೂ ಕರ್ನಾಟಕದಲ್ಲಿ ಇದನ್ನು ಎಂದಿಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಮದ್ರಸಗಳಿಂದ ಶಿಕ್ಷಣ ಪಡೆದವರು ನಮ್ಮ ದೇಶಕ್ಕೆ ಎಂದಿಗೂ ಬೇಡ. ಅಲ್ಲಿ ವೈದ್ಯರು, ಎಂಜಿನಿಯರ್ ಗಳು ತಯಾರಾಗುವುದಿಲ್ಲ.‌ಹೀಗಾಗಿ‌ ನಾನು ಅಸ್ಸಾಂ ಮುಖ್ಯಮಂತ್ರಿಯಾಗಿ ಬಂದ ಎರಡು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಇದ್ದ ಮದ್ರಸಗಳನ್ನು ಬಂದ್ ಮಾಡಿಸಿದ್ದೇನೆ.‌ ಅದೇ ರೀತಿ ಈಗ ಮಧ್ಯಪ್ರದೇಶದಲ್ಲೂ ಬಂದ್ ಮಾಡಿಸುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ಸಿಗರು ಮೀಸಲಾತಿ ನೀಡುವುದಾದರೆ ಹಿಂದೂಗಳಿಗೆ, ಜೈನರಿಗೆ, ಬೌದ್ಧರಿಗೂ , ಕ್ರೈಸ್ತರಿಗೂ ನೀಡಿ. ನೀವು ಮುಸಲ್ಮಾನರಿಗೆ ಮಾತ್ರ ಮೀಸಲಾತಿ ನೀಡಿ ತುಷ್ಟೀಕರಣ ರಾಜನೀತಿ ಯಾಕೆ ಮಾಡುತ್ತಿದ್ದೀರಿ. ನಾನು ಕಾಂಗ್ರೆಸ್ಸಿನ ಪ್ರಣಾಳಿಕೆ ನೋಡಿದೆ. ಅದರಲ್ಲಿ ಪ್ರತಿ ವರ್ಷ 10 ಕೋಟಿ ರೂ. ಮುಸಲ್ಮಾನರ ಅಭಿವೃದ್ಧಿ ನೀಡುವುದಾಗಿ ಹೇಳಿದ್ದೀರಿ. ಹಿಂದುಗಳು ಏನಾದರೂ ಪಾಪ ಮಾಡಿದ್ದಾರಾ. ಕರ್ನಾಟಕದಲ್ಲಿ ಹಿಂದುಗಳು ಇಲ್ಲವಾ ಎಂದು ಪ್ರಶ್ನಿಸಿದರು.

ಇದು ಸಂಪೂರ್ಣ ತುಷ್ಟೀಕರಣದ ಪ್ರಣಾಳಿಕೆಯಾಗಿದೆ. ನಿಮಗೆ ಮುಸಲ್ಮಾನರನ್ನು ಬಿಟ್ಟು ಬಡವರು ಕಾಣುವುದೇ ಇಲ್ಲ. ಮತಾಂತರ, ಗೋಹತ್ಯೆ ಕಾಯಿದೆಯನ್ನು ಹಿಂಪಡೆಯುತ್ತೇವೆ ಎನ್ನುವ ಮೂಲಕ ಸನಾತನ‌ ಧರ್ಮೀಯರನ್ನು ಕಡೆಗಣಿಸಿದ್ದೀರಿ
ಎಂದು ಹರಿಹಾಯ್ದರು.

ಅಮಿತ್ ಶಾ ಅವರು ಬೆಳಗ್ಗೆ ದೆಹಲಿಯಲ್ಲಿ ಪಿಎಫ್ ಐ ನ್ನು ನಿಷೇಧ ಮಾಡಿದರು.‌ಅದೇ ದಿನ ಸಂಜೆ ನಾನು ಅಸ್ಸಾಂ ನಲ್ಲಿ 400 ಕೇಂದ್ರಗಳನ್ನು ಮಟ್ಟಹಾಕಿದ್ದೇನೆ. ಇವತ್ತು ಕರ್ನಾಟಕದಲ್ಲಿ, ಕೇರಳದಲ್ಲಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಗಳ ಸ್ಲೀಪರ್ ಸೆಲ್ ಗಳು ಇವೆ. ಹೀಗಾಗಿ ಕರ್ನಾಟಕವು ಅಪಾಯದಲ್ಲಿದೆ. ಇನ್ನೂ ಪೂರ್ಣ ಮುಕ್ತ ಆಗಿಲ್ಲ. ಆದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ, ಬಿಜೆಪಿಯು ಪಿಎಫ್ಐ ನಿಷೇಧಿಸಿದಂತೆ ನಾವು ಬಜರಂಗವನ್ನು ನಿಷೇಧಿಸುತ್ತೇವೆ ಹೇಳಿದ್ದಾರೆ. ಪಿಎಫ್ಐ ಏನು ನಿಮ್ಮ ಮಗನ, ಮಗಳ ಎಂದು ಗುಡುಗಿದ ಅವರು ಪಿಎಫ್ಐ ನಿಷೇಧ ಮಾಡದಿದ್ದರೆ ಪ್ರತಿದಿನ ಸ್ಲೀಪರ್ ಸೆಲ್ ತಲೆ ಎತ್ತುತ್ತದೆ. ಇವತ್ತು ಕಾಶ್ಮೀರದಲ್ಲಿ ಐದು ಮಂದಿಯೋಧರು ಹುತಾತ್ಮರಾಗಿದ್ದಾರೆ. ಇಂದು ಪಿಎಫ್ಐನಂತಹ ದೇಶದ್ರೋಹಿಯೊಂದಿಗೆ ಸೇರಿ ಕೊಂಡ ಕಾಂಗ್ರೆಸ್ಸನ್ನು ಶಿಕ್ಷಿಸಲೇ ಬೇಕು ಎಂದರು.

65 ವರ್ಷ ಆಳಿದ ಕಾಂಗ್ರೆಸ್ ಈಗ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದೆ. ಮೋದಿಜೀ ಬರುವ ತನಕ ಯಾವುದೇ ಅಭಿವೃದ್ದಿ ಚಟುವಟಿಕೆ ಆಗಿರಲಿಲ್ಲ. ರಾಹುಲ್ ಗಾಂಧಿ ಮೊದಲು ತನಗೆ ತಾನೆ ಗ್ಯಾರಂಟಿ ಕೊಟ್ಟುಕೊಳ್ಳಲಿ.‌ಮತ್ತೆ ಜನರ ಬಗ್ಗೆ ಮಾತನಾಡಲಿ. ದೇಶ ವಿದೇಶ ಸುತ್ತಾಡುತ್ತಿರುವ ರಾಹುಲ್ ಗಾಂಧಿಗೆ ತನ್ನ ಗ್ಯಾರಂಟಿಯೇ ಇಲ್ಲ. ಅವರ ಅಮ್ಮ ಪ್ರತಿ ದಿನ ಮಗನ ಬಗ್ಗೆ ಚಿಂತೆ ಮಾಡುತ್ತಿದ್ದರೆ ಇವರು ಕರ್ನಾಟಕಕ್ಕೆ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಇಂದು ದೇಶವು ಎಲ್ಲಾ ಕ್ಷೇತ್ರ ಗಳಲ್ಲಿ ನಂಬರ್ ವನ್ ಆಗುವತ್ತ ದಾಪುಗಾಲು ಇಡುತ್ತಿದೆ. ರಾಹುಲ್ ಗಾಂಧಿ‌ ಕರ್ನಾಟಕ ಜನತೆಗೆ ಕಲಿಸಬೇಕಾಗಿಲ್ಲ. ಅವರು ಕರ್ನಾಟಕ ಜನತೆಯಿಂದ ಕಲಿಯಬೇಕಾಗಿದೆ . ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅವರು ಅವರ ಕಚೇರಿಗೆ ಹೋಗಿ ನೋಡಲಿ. ಎಲ್ಲರೂ ಭ್ರಷ್ಟರೇ ಇದ್ದಾರೆ ಎಂದರು.

ಇಲ್ಲಿನ ಅಭ್ಯರ್ಥಿ ಹರೀಶ್ ಪೂಂಜ ಅವರು ಉಜಿರೆಯಲ್ಲಿ‌ ಏರ್ ಪೋರ್ಟ್ ಮಾಡುವ ಬಗ್ಗೆ ತಿಳಿಸಿದ್ದಾರೆ. ಅವರು ಐದು ವರ್ಷಗಳಲ್ಲಿ 3500 ರೂ.ಕೋಟಿಗಿಂತಲೂ ಅಧಿಕ‌ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೋದಿಜೀಯ ಪ್ರೇರಣೆಯಿಂದ
ಇಲ್ಲಿನ ಗ್ರಾಮೀಣ ಪ್ರದೇಶದ ಮೂಲೆಮೂಲೆಗಳಿಗೂ ರಸ್ತೆ, ವಿದ್ಯುದ್ದೀಕರಣ, ನೀರಾವರಿ ಸೌಕರ್ಯ ಕಲ್ಪಿಸಿದ್ದಾರೆ. ನಾವು ವಿಧಾನಸಭೆಯಲ್ಲೂ ಬಿಜೆಪಿಯನ್ನು ಆಡಳಿತಕ್ಕೆ ತರಬೇಕು. ಅದೇ ರೀತಿ ಕೇಂದ್ರದಲ್ಲಿ ಮೋದಿಯನ್ನು ಮೂರನೇ ಬಾರಿ ಅಧಿಕಾರಕ್ಕೆ ತರಬೇಕು. ಬೆಳ್ತಂಗಡಿಯಲ್ಲೂ ಯುವ ನೇತಾರ, ಅಭಿವೃದ್ದಿಯ ಹರಿಕಾರ ಹರೀಶ್ ಪೂಂಜರನ್ನು 60 ಸಾವಿರ ಮತಗಳಿಂದ ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು ನಾವು ಕೋಮುವಾದದ ವಿರುದ್ದ ಹೋರಾಡಬೇಕು.‌ ವಿಕಾಸ ಕಾರ್ಯ ಮುಂದುವರಿಸಬೇಕು ಎಂದರು.

ಕೊನೆಯಲ್ಲಿ ಅವರು ಇಲ್ಲಿನ ಜನತೆ ಅಸ್ಸಾಂಗೆ ಅಲ್ಲಿನ ಕಾಮಾಖ್ಯ ದೇವಿಯ ದರ್ಶನ ಪಡೆಯುವಂತೆ ವಿನಂತಿಸಿದರು.
ಶಾಸಕ‌, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮಾತನಾಡಿ, ನಾನು ಐದು ವರ್ಷಗಳ ಹಿಂದೆ ಮಾಡಿದ ಕೆಲಸ ಕಾರ್ಯಗಳು ಇಂದು ನಿಮ್ಮ ರೂಪದಲ್ಲಿ ಪ್ರತಿಬಿಂಬಿಸುತ್ತಿದೆ. ಐದು ವರ್ಷದಲ್ಲಿ ಮಾಡಿದ ಕೆಲಸ ಕಾರ್ಯಗಳು ನಿಮ್ಮ ರೂಪದಲ್ಲಿ ಮಾತನಾಡುತ್ತಿದೆ. ಐದು ವರ್ಷದ ಹಿಂದೆ ನಾನು ಯಾವ ಉದ್ದೇಶ ಮತ್ತು ಕನಸು ಗಳನ್ನು ಇಟ್ಟುಕೊಂಡು ಬಂದಿದ್ದೇನೋ‌ ಮತ್ತು ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪವನ್ನು ಇಟ್ಟುಕೊಂಡಿದ್ದೆನೋ ಆ ಸಂಕಲ್ಪ ವನ್ನು ಐದು ವರ್ಷಗಳಿಂದ ಈಡೇರಿಸಿದ್ದೇನೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ನಮ್ಮ ತಾಲೂಕಿನ ಯುವ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಕೊಡುವ ಬಾರಿ ದೊಡ್ಡ ಯೋಜನೆಯನ್ನು ಉಜಿರೆ ಪರಿಸರದಲ್ಲಿ ಹಾಕಿ ಕೊಂಡಿದ್ದೇನೆ.‌ ಇದರಿಂದ ಎರಡರಿಂದ ಎರಡೂವರೆ ಸಾವಿರ ಜನರಿಗೆ ಉದ್ಯೋಗ ಅವಕಾಶ ಸೃಷ್ಟಿ ಆಗಲಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ರಾಜ್ಯ ಗುರುತಿಸುಂತೆ ಮಾಡಿದ್ದೇನೆ.‌ಮುಂದಿನ ಐದು ವರ್ಷದಲ್ಲಿ ಪ್ರದಾನಂಮತ್ರಿಗಳು ಗುರುತಿಸುವಂತೆ ಅಭಿವೃದ್ಧಿ ಮಾಡುತ್ತೇನೆ ಎಂದರು.

ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್, ಹಿರಿಯರಾದ ಕುಶಾಲಪ್ಪ ಗೌಡ, ಉದಯ ಪೂಜಾರಿ ಇದ್ದರು. ರೋಡ್ ಶೋ ಉಜಿರೆ ಎಸ್.ಡಿ.ಎಂ.ಕಾಲೇಜಿನ ಎದುರು ಭಾಗದಿಂದ ಜನಾರ್ದನ ಸ್ವಾಮಿ ದೇವಳದವರೆಗೆ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು