News Karnataka Kannada
Wednesday, April 24 2024
Cricket
ಉಡುಪಿ

ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Dc
Photo Credit : News Kannada

ಉಡುಪಿ: ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ಮುಂಬರುವ ಬೇಸಿಗೆ ದಿನಗಳಲ್ಲಿ ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ನೀರನ್ನು ಒದಗಿಸಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನಿರ್ಮಿಸಿರುವ ಪ್ರತಿಯೊಂದು ಕಿಂಡಿ ಆಣೆಕ್ಟುಗಳಿಗೆ ಹಲಗೆಗಳನ್ನು ಅಳವಡಿಸಬೇಕು. ಇದರಿಂದ ನೀರು ನಿಂತು ಅಂತರ್ಜಲ ಮಟ್ಟ ಏರುತ್ತದೆ. ಹಲಗೆಗಳನ್ನು ಅಳವಡಿಸದೇ ಇದ್ದಲ್ಲಿ ನೀರು ಮುಂದೆ ಹರಿದು ಹೋಗುತ್ತದೆ ಅಥವಾ ಸಮುದ್ರದ ಉಪ್ಪು ನೀರು ಸಿಹಿ ನೀರಿನೊಂದಿಗೆ ಬೆರೆಯುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯವರು ಕ್ರಮವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಬೇಸಿಗೆ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿಯುವುದರ ಜೊತೆಗೆ ಕಣಿವೆಗಳಲ್ಲಿ ನೀರು ಹರಿಯುವ ಸೆಲೆಗಳು ಕಡಿಮೆಯಾಗಿರುತ್ತದೆ. ಹಾಗೂ ಬಿಸಿಲಿಗೆ ಕೆರೆ, ಜಲಾಶಯಗಳಲ್ಲಿ ನೀರಿನ ಆವಿಯು ಉಂಟಾಗುತ್ತದೆ. ಹೀಗಾಗಿ ನೀರಿನ ಕೊರತೆ ಕೆಲವು ಪ್ರದೇಶಗಳಲ್ಲಿ ಆಗುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆ ಜನ ಸಾಮಾನ್ಯರಿಗೆ ಕುಡಿಯುವ ನೀರನ್ನು ಒದಗಿಸಲು ನೀರು ಲಭ್ಯವಿರುವ ಖಾಸಗಿಯವರ ಬಾವಿ, ಕೊಳವೆ ಬಾವಿಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಒಂದೊಮ್ಮೆ ಸಮಸ್ಯೆಗಳು ಉಂಟಾದರೆ ಅವುಗಳಿಂದ ನೀರು ಒದಗಿಸಲು ಮುಂದಾಗಬೇಕು ಎಂದು ಹೇಳಿದರು.

ಪ್ರಸ್ತುತ ಜಿಲ್ಲೆಯಲ್ಲಿ 21 ವಾರಗಳಿಗೆ ಆಗುವಷ್ಟು 2.25 ಲಕ್ಷ ಮೆಟ್ರಿಕ್ ಟನ್ ನಷ್ಟು ಮೇವು ಲಭ್ಯವಿದೆ. ಸರ್ಕಾರ ಈಗಾಗಲೇ 5 ಲಕ್ಷ ಅನುದಾನವನ್ನು ಮೇವು ಸಂಗ್ರಹಣೆಗೆ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ರೈತರಿಗೆ ಈಗಾಗಲೇ ನೀಡಲಾಗಿರುವ ಮೇವಿನ ಮಿನಿ ಕಿಟ್ ಗಳು ಹಾಗೂ ಪ್ರಸ್ತುತ ಬೆಳೆದಿರುವ ಮೇವು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ ಮುಂದೇನಾದರೂ ಸಮಸ್ಯೆ ಉಂಟಾದರೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ನೋಡಿಕೊಳ್ಳಬೇಕು. ಪಶು ಸಂಗೋಪನೆ ಇಲಾಖೆ ವತಿಯಿಂದ ಈಗಾಗಲೇ 1654 ಕಿಟ್ ಹಾಗೂ ಕೆ.ಎಂ.ಎಫ್ ವತಿಯಿಂದ 3918 ಕಿಟ್ ಗಳನ್ನು ವಿತರಿಸಲಾಗಿದೆ. ಗಾಗಲೇ ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ನಡೆಸುವುದರೊಂದಿಗೆ ಬರ ನಿರ್ವಹಣೆ ಕಾರ್ಯಗಳನ್ನು ಮಾಡಬೇಕು ಎಂದು ಸೂಚನೆ ನೀಡಿದರು.

ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ತೋಡು ಹಾಗೂ ಚರಂಡಿಗಳಲ್ಲಿರುವ ಹೂಳು, ತರಗೆಲೆ, ಕಸ-ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ನೀರು ನಿಂತಲ್ಲಿ ಸೊಳ್ಳೆಗಳ ಸಂತಾನೋತ್ಪತಿಗೆ ಆಸ್ಪದವಾಗಿ ರೋಗ ರುಜಿನಗಳು ಹರಡುವ ಸಾಧ್ಯತೆ ಇರುವುದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದ ಅವರು, ಕುಡಿಯುವ ನೀರಿನ ಪೈಪ್‌ಲೈನ್ ದುರಸ್ಥಿ, ಶುದ್ಧ ಕುಡಿಯುವ ನೀರಿನ ಬಾವಿಯ ಸ್ವಚ್ಛತೆ, ಸರಕಾರಿ ಕಟ್ಟಡಗಳ ಮೇಲ್ಛಾವಣಿಯಲ್ಲಿರುವ ಕಸ-ಕಡ್ಡಿಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಆಶ್ರಯ ತಾಣಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದಲ್ಲಿ ಇವುಗಳ ಬಳಕೆ ಮಾಡಿಕೊಳ್ಳಬೇಕು. ಇವುಗಳ ನಿರ್ವಹಣೆ ಮಾಡಲು ಸಮಿತಿಯನ್ನು ರಚಿಸಬೇಕು ಎಂದ ಅವರು, 300 ಜನ ಆಪದ್ ಮಿತ್ರ ಸ್ವಯಂ ಸೇವಕರಿದ್ದು, ಇದರ ಜೊತೆಯಲ್ಲಿ ಇನ್ನು ಹೆಚ್ಚು ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಬೇಕು ಎಂದು ಹೇಳಿದರು.

ಸಾರ್ವಜನಿಕರು ನೀರಿನ ಮಿತ ಬಳಕೆ ಮಾಡಬೇಕು, ಪ್ರತಿಯೊಂದು ಕಟ್ಟಡಗಳು ಹಾಗೂ ಜಮೀನುಗಳಲ್ಲಿ ಮಳೆ ನೀರಿನ ಕೊಯ್ಲು ಅಳವಡಿಕೆ ಮಾಡಿ ನೀರು ಎಲ್ಲಿಯೂ ಪೋಲಾಗದಂತೆ ನೋಡಿಕೊಂಡರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇದರ ಬಗ್ಗೆ ಒತ್ತು ನೀಡಬೇಕು ಎಂದ ಅವರು, ಸ್ಥಳೀಯ ಸಂಸ್ಥೆಗಳು ಕಟ್ಟಡ ಪರವಾನಿಗೆ ನೀಡುವಾಗ ಕಡ್ಡಾಯವಾಗಿ ಮಳೆ ನೀರಿನ ಕೊಯ್ಲು ಅಳವಡಿಸಲು ಸೂಚನೆ ನೀಡಬೇಕು ಎಂದರು.

ವಿದ್ಯುತ್ ತಂತಿಗಳಿಗೆ ಅಪಾಯಕಾರಿಯಾಗಿರುವಂತಹ ಮರದ ಕೊಂಬೆಗಳನ್ನು ಹಾಗೂ ಗಾಳಿ ಮಳೆಗೆ ಬುಡ ಸಮೇತ ಉರುಳಿ ಬೀಳುವಂತ ಮರಗಳನ್ನು ಆದ್ಯತೆಯ ಮೇಲೆ ತೆರವುಗೊಳಿಸಲು ಅರಣ್ಯ ಇಲಾಖೆಯು ಇತರ ಇಲಾಖೆಯ ಸಂಹಯೋಗದೊಂದಿಗೆ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಉಪ ವಿಭಾಗಾಧಿಕಾರಿ ರಶ್ಮಿ ಎಸ್, ಪೌರಾಯುಕ್ತ ರಾಯಪ್ಪ, ತಾಲೂಕುಗಳ ತಹಶೀಲ್ದಾರ್‌ಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು