ಉಡುಪಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿ, ಪೋಕ್ಸೋ ಮತ್ತು ಐ.ಟಿ. ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತನನ್ನು ಕುಂದಾಪುರದ ಗುಲ್ವಾಡಿಯ ಇಮ್ರಾನ್ (24) ಎಂದು ಗುರುತಿಸಲಾಗಿದೆ. ಕಾರ್ಕಳದ ಅಪ್ರಾಪ್ತ ಬಾಲಕಿಗೆ ಆಶ್ಲೀಲ ಚಿತ್ರ ಕಳುಹಿಸಿ ಕಿರುಕುಳ ನೀಡಲಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, 12 ವರ್ಷದ ಬಾಲಕಿಯ ಮನೆಗೆ ಭೇಟಿ ನೀಡಿ ಆಪ್ತ ಸಮಾಲೋಚನೆ ನಡೆಸಿದ್ದು, ಇಮ್ರಾನ್ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಷಯ ಖಚಿತವಾಗಿತ್ತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಕಾರ್ಕಳ ನಗರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು, ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕ ಮಧು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಅವರ ಆದೇಶದಂತೆ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ.