Categories: ಮಂಗಳೂರು

ಮಂಗಳೂರು: ಖಾದರ್‌ಗೆ ಸ್ಫೀಕರ್‌ ಪಟ್ಟ, ಕರಾವಳಿ ಕಾಂಗ್ರೆಸ್‌ ಗೆ ಹಿನ್ನಡೆ

ಮಂಗಳೂರು: ಕರ್ನಾಟಕ ವಿಧಾಸಭೆ ಇತಿಹಾಸದಲ್ಲಿ ಸ್ಪೀಕರ್‌ ಹುದ್ದೆ ಅಲಂಕರಿಸಿದ ಮೊದಲ ಮುಸ್ಲಿಂ ಸಮುದಾಯದ ಸದಸ್ಯರಾಗಿ ಯು.ಟಿ. ಖಾದರ್‌ ಗುರುತಿಸಿಕೊಂಡಿದ್ದಾರೆ. ವಿಧಾನಸಭೆ ಸ್ಪೀಕರ್‌ ಹುದ್ದೆ ದೊಡ್ಡ ಗೌರವವೇ ಆದರೂ ಕ್ರಿಯಾಶೀಲ ನಾಯಕರಿಗೆ ಅದು ಹೇಳಿಸಿದ್ದಲ್ಲ ಎಂಬ ಭಾವನೆ ರಾಜಕೀಯದಲ್ಲಿದೆ. ಈ ಕಾರಣಕ್ಕೆ ಸ್ಪೀಕರ್‌ ಆಗುವವರು ಸಾಕಷ್ಟು ಹಿರಿಯರೂ ಅನುಭವಿಗಳೂ ಆಗಿರುತ್ತಾರೆ. ಆದರೆ ಈ ಸಲ ಕಾಂಗ್ರೆಸ್‌ ಕ್ರಿಯಾಶೀಲ ಶಾಸಕ ಯು. ಟಿ. ಖಾದರ್‌ ಅವರನ್ನು ವಿಧಾನಸಭೆಯ ಸ್ಪೀಕರ್‌ ಆಗಿ ನೇಮಿಸಿ ಅಚ್ಚರಿಯುಂಟು ಮಾಡಿದೆ. ಸ್ಥಾನ ದೊಡ್ಡದೆ ಆದರೂ ಖಾದರ್‌ ಅವರಂಥ ಜನರ ಮಧ್ಯೆ ಬೆರೆತು ರಾಜಕಾರಣ ಮಾಡುವ ಶಾಸಕನ ಓಟಕ್ಕೆ ಇದು ತಡೆಯಾಗಲಿದೆ ಎಂಬ ಭಾವನೆ ಅವರ ಬೆಂಬಲಿಗರಲ್ಲಿದೆ.

ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಗೆದ್ದಿರುವುದು ಎರಡೇ ಸ್ಥಾನ. ಒಂದು ಪುತ್ತೂರು ಮತ್ತು ಇನ್ನೊಂದು ಖಾದರ್‌ ಪ್ರತಿನಿಧಿಸುವ ಮಂಗಳೂರು. 5 ಸಲ ಸಚಿವರಾಗಿರುವ ಖಾದರ್‌ಗೆ ಈ ಸಲ ಸಚಿವ ಸ್ಥಾನ ಸಿಗುವುದೇನೂ ಕಷ್ಟವಾಗಿರಲಿಲ್ಲ. ಕರಾವಳಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕೆಂಬ ವಿಚಾರ ಬಂದಾಗ ಖಾದರ್‌ ಅವರ ಹೆಸರೇ ಮುಂಚೂಣಿಯಲ್ಲಿದ್ದದ್ದು. ಉತ್ತಮವಾದ ಖಾತೆಯ ಜತೆಗೆ ದಕ್ಷಿಣ ಕನ್ನಡ ಉಸ್ತುವಾರಿಯೂ ಖಾದರ್‌ಗೆ ಸಿಗುವ ಸಾಧ್ಯತೆಯಿತ್ತು. ಇಷ್ಟೆಲ್ಲ ಅವಕಾಶಗಳಿರುವಾಗ ಖಾದರ್‌ ಏಕೆ ಸ್ಪೀಕರ್‌ ಹುದ್ದೆಯನ್ನು ಒಪ್ಪಿಕೊಂಡರು ಎಂಬುದು ನಿಗೂಢವಾಗಿ ಉಳಿದಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಖಾದರ್‌ ಬೆಂಬಲಿಗರು ಈಗ ನಿರಾಶೆಗೊಂಡಿದ್ದಾರೆ. ಖಾದರ್ ಅವರನ್ನು ಸಚಿವರನ್ನಾಗಿ ಮಾಡಿದ್ದರೆ 13ರಲ್ಲಿ 2 ಸ್ಥಾನ ಗಳಿಸಿರುವ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪಕ್ಷದ ಪುನಶ್ಚೇತನಕ್ಕೆ ಸಹಕಾರಿಯಾಗುತ್ತಿತ್ತು.

ಬಿ. ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಕೆ. ಅಭಯಚಂದ್ರ ಜೈನ್, ಕೆ. ವಸಂತ ಬಂಗೇರ ಅವರಂತಹ ಹಿರಿಯರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ನಂತರ ಖಾದರ್ ಮಾತ್ರ ಪಕ್ಷದ ಹಿರಿಯ ನಾಯಕರಾಗಿದ್ದರು. ಅವರು ಆ ಪ್ರದೇಶದಲ್ಲಿ ಪಕ್ಷದ ಭವಿಷ್ಯವನ್ನು ಬದಲಿಸಬಹುದಿತ್ತು. ಅವರ ಮೇಲೆ ದೊಡ್ಡ ಜವಾಬ್ದಾರಿಯೂ ಇತ್ತು.
ಖಾದರ್ ಈ ಭಾಗದ ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ವಾಸ್ತವವನ್ನು ತಿಳಿದಿದ್ದಾರೆ ಮತ್ತು ಪಕ್ಷದ ಕಾರ್ಯಕರ್ತರು ಮತ್ತು ಜನರ ವಿಶ್ವಾಸ ಗಳಿಸಿದ್ದಾರೆ. ಈ ಭಾಗದ ಮೂವರು ಎಂಎಲ್‌ಸಿಗಳು ಮತ್ತು ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಖಾದರ್‌ ಸ್ಪೀಕರ್‌ ಆಗಿರುವುದರಿಂದ ಆ ಪ್ರದೇಶದಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ ಎಂದು ಖಾದರ್ ಆಪ್ತರು ಭಾವಿಸಿದ್ದಾರೆ.
ಖಾದರ್ ಸ್ಪೀಕರ್ ಸ್ಥಾನವನ್ನು ಒಪ್ಪಿಕೊಂಡಿರುವುದು ಅನೇಕರಿಗೆ ಆಘಾತವನ್ನುಂಟುಮಾಡಿದೆ. ಖಾದರ್‌ ಈ ಕೊಡುಗೆಯನ್ನು ನಿರಾಕರಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಭಾಧ್ಯಕ್ಷರಾಗಿ ಪಕ್ಷಾತೀತವಾಗಿ ವರ್ತಿಸಬೇಕು ಮತ್ತು ತಟಸ್ಥ ನಿಲುವು ಹೊಂದಿರಬೇಕು. ಹೀಗಾಗಿ ಕರಾವಳಿಯ ರಾಜಕೀಯದ ಬಗ್ಗೆ ಖಾದರ್‌ ಬಹಿರಂಗವಾಗಿ ಏನೂ ಮಾತನಾಡುವಂತಿಲ್ಲ. ಇದು ಪಕ್ಷಕ್ಕೆ ಹಿನ್ನಡೆಯಾಗಿ ಪರಿಣಮಿಸಬಹುದು ಎನ್ನುವುದು ಹೆಚ್ಚಿನವರ ಭಾವನೆ. ಎದುರಾಳಿಗಳ ಪಟ್ಟುಗಳಿಗೆ ಪ್ರತಿ ಏಟು ಕೊಡಲು ಕರಾವಳಿಯಲ್ಲಿ ಸಮರ್ಥ ನಾಯಕರಿಲ್ಲದಂತಾಗುತ್ತದೆ ಎಂಬ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದಾರೆ.

ಸ್ಪೀಕರ್‌ ಆಗುವುದಕ್ಕಿಂತ ಶಾಸಕರಾಗಿದ್ದರೆ ಉತ್ತಮ: ಸ್ಪೀಕರ್‌ ಆಗುವುದಕ್ಕಿಂತ ಖಾದರ್ ಶಾಸಕರಾಗಿದ್ದರೆ ಚೆನ್ನಾಗಿತ್ತು. ಸಚಿವ ಪಟ್ಟ ಸಿಗದಿದ್ದರೂ ಪರವಾಗಿರಲಿಲ್ಲ ಎಂದು ಬೆಂಬಲಿಗರು ಹೇಳುತ್ತಿದ್ದಾರೆ. ಸದಾ ತಮ್ಮ ಕ್ಷೇತ್ರದಲ್ಲಿದ್ದುಕೊಂಡು ಜನರ ಸಮಸ್ಯೆಗಳನ್ನು ಬಗೆಹರಿಸಲು ಇಷ್ಟಪಡುವ ಖಾದರ್‌ಗೆ ಆ ಸ್ಥಾನ ಎರಡೂ ಕೈ ಕಟ್ಟಿಕೊಟ್ಟಂತಾಗುತ್ತದೆ ಎಂದು ಬೆಂಬಲಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಈ ಸಲ ಕಾಂಗ್ರೆಸ್‌ಗೆ ನಿಚ್ಚಳ ಬಹುಮತ ಇದ್ದರೂ ಪಕ್ಷ ಮಾತ್ರ ಎರಡು ಅಧಿಕಾರ ಕೇಂದ್ರಗಳನ್ನು ಹೊಂದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಅಧಿಕಾರ ಹಂಚಿಹೋಗಿದೆ. ಇಬ್ಬರೂ ತಮ್ಮ ನಿಷ್ಠರಿಗೆ ಆಯಕಟ್ಟಿನ ಹುದ್ದೆಗಳನ್ನು ದೊರಕಿಸಿಕೊಡಲು ಪ್ರಯತ್ನಸುತ್ತಿದ್ದಾರೆ. ಖಾದರ್‌ ಈ ಎರಡೂ ಬಣಗಳಲ್ಲಿ ಗುರುತಿಸಿಕೊಳ್ಳದೆ ಪಕ್ಷಕ್ಕೆ ಮಾತ್ರ ನಿಷ್ಠೆ ಹೊಂದಿದ್ದರು. ಇದೇ ಅವರಿಗೆ ಅಡ್ಡಗಾಲಾಯಿತು ಎನ್ನಲಾಗುತ್ತಿದೆ.
ಸ್ಪೀಕರ್‌ ಆದವರು ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ನಂಬಿಕೆಯೊಂದು ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಇರುವುದರಿಂದ ಈ ಹುದ್ದೆಯನ್ನು ಒಪ್ಪಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಗೆದ್ದ ಅನೇಕ ಹಿರಿಯರಿಗೆ ಮಂತ್ರಿಯಾಗುವ ಹಂಬಲ ಇದೆ. ಹಲವು ಮಂದಿ ಇದು ತಮ್ಮ ಕೊನೆಯ ಚುನಾವಣೆಯಾಗಿರುವುದರಿಂದ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಸಚಿವರಾಗುವ ಎಲ್ಲ ಯೋಗ್ಯತೆಯನ್ನೂ ಹೊಂದಿರುವ ಖಾದರ್‌ ಅವರನ್ನು ಸ್ಪೀಕರ್‌ ಹುದ್ದೆ ಒಪ್ಪಿಕೊಳ್ಳುವಂತೆ ಪಕ್ಷ ಮನವೊಲಿಸಿದೆ. ಬಣದಲ್ಲಿ ಗುರುತಿಸಿಕೊಂಡು ಲಾಬಿ ಮಾಡದಿರುವುದು ಕೂಡ ಅವರಿಗೆ ಸಚಿವ ಸ್ಥಾನ ತಪ್ಪಲು ಕಾರಣವಾಗಿದೆ.

ಖಾದರ್‌ ಸಾಫ್ಟ್‌ ಟಾರ್ಗೆಟ್‌:  ಖಾದರ್ ಪರ ಲಾಬಿ ಮಾಡಲು ಯಾರೂ ಇಲ್ಲದ ಕಾರಣ ಅವರು ಸಾಫ್ಟ್ ಟಾರ್ಗೆಟ್ ಆದರು. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಪಾಳಯದಲ್ಲಿ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರದಂತೆ ತಡೆಯಬಹುದಿತ್ತು ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ.
ಎಲ್ಲ ಜವಾಬ್ದಾರಿಗಳನ್ನು ಖಾದರ್ ಸಮರ್ಥವಾಗಿ ನಿಭಾಯಿಸಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಆರೋಗ್ಯ ಸಚಿವರಾಗಿ ಅವರು ನೀಡಿದ ಕೊಡುಗೆಗಳನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ಹೀಗಿದ್ದರೂ ಈ ಸಲ ಅವರು ಸಚಿವರಾಗುತ್ತಿಲ್ಲ ಎನ್ನುವುದು ಅನೇಕರಿಗೆ ಆಘಾತವುಂಟು ಮಾಡಿದೆ.

Umesha HS

Recent Posts

ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌!

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

5 hours ago

ಐದು ಮಂದಿಗೆ ವೆಸ್ಟ್ ನೈಲ್ ಜ್ವರ ಪತ್ತೆ; ಅಲರ್ಟ್ ಆದ ಸರಕಾರ

ವೆಸ್ಟ್ ನೈಲ್ ಫೀವರ್ ನ ಐದು ಪ್ರಕರಣಗಳು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.

5 hours ago

ಆಂಬುಲೆನ್ಸ್ ನೌಕರರ ಮುಷ್ಕರ ತಾತ್ಕಾಲಿಕ ಮುಂದೂಡಿಕೆ

ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಗೆ ಆಗ್ರಹಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

5 hours ago

ಬೆಂಗಳೂರಿನಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಬರ್ಬರ ಹತ್ಯೆ

ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

6 hours ago

ಪಕ್ಷದ ಬ್ಯಾಡ್ಜ್ ಧರಿಸಿ ಮತದಾನ; ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…

6 hours ago

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

7 hours ago