Categories: ಮಂಗಳೂರು

ಎರಡನೇ ಅವಧಿಗೆ ಬೆಳ್ತಂಗಡಿಗೆ ಬಿಜೆಪಿಯ ಶಾಸಕರಾಗಿ ಪೂಂಜ

ಬೆಳ್ತಂಗಡಿ: ಎರಡನೇ ಅವಧಿಗೆ ಬೆಳ್ತಂಗಡಿಗೆ ಬಿಜೆಪಿಯ ಶಾಸಕರಾಗಿದ್ದಾರೆ ಹರೀಶ ಪೂಂಜ ಅವರು. ಮೆ ೧೦ ರಂದು ನಡೆದ ಮತದಾನದಲ್ಲಿ ಬಿಜೆಪಿ ಪಕ್ಷದ ಪೂಂಜ ಅವರು ೧,೦೧,೦೦೪ ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಕಾಂಗ್ರೇಸ್‌ ಪಕ್ಷದ ರಕ್ಷಿತ್‌ ಶಿವರಾಂ ಅವರನ್ನು ೧೮,೨೧೬ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ರಕ್ಷಿತ್‌ ಶಿವರಾಂ ಅವರಿಗೆ ೮೨,೭೮೮ ಮತಗಳು ಲಭ್ಯವಾಗಿವೆ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ೮ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ಜೆಡಿಎಸ್‌ನ ಅಶ್ರಫ್‌ ಆಲಿಕುಂಞ ಅವರು ೫೫೬, ಪಕ್ಷೇತರ ಅಭ್ಯರ್ಥಿ ಜನಾರ್ದನ ಬಂಗೇರ ಅವರು ೨೭೮, ಕಾಂಗ್ರೇಸ್‌ನ ರಕ್ಷಿತ್‌ ಶಿವರಾಂ ಅವರು ೮೨,೭೮೮, ಬಿಜೆಪಿಯ ಹರೀಶ್‌ ಪೂಂಜ ಅವರು ೧,೦೧,೦೦೪, ಎಸ್‌.ಡಿ.ಪಿ.ಐ.ಯ ಅಕ್ಬರ್‌ ಅವರು ೨೫೧೩, ಸರ್ವೋದಯ ಕರ್ನಾಟಕ ಪಕ್ಷದಿಂದ ಆದಿತ್ಯ ನಾರಾಯಣ ಕೊಲ್ಲಾಜೆ ಅವರು ೪೫೪, ತುಳುನಾಡ ಪಕ್ಷದಿಂದ ಶೈಲೇಶ ಆರ್.ಜೆ. ಅವರು ೩೦೮ ಹಾಗೂ ಪಕ್ಷೇತರರ ಅಭ್ಯರ್ಥಿ ಮಹೇಶ್‌ ಅಟೋ ಅವರು ೨೧೪ ಮತಗಳನ್ನುಗಳಿಸಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು ೧,೮೮,೧೧೫ ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ ೩೪೧ ಮತಗಳು ತಿರಸ್ಕೃತಗೊಂಡಿದ್ದರೆ, ೮೯೨ ಮತಗಳು ನೋಟಾ ಆಗಿದ್ದವು. ಸುರತ್ಕಲ್‌ನ ಎನ್.‌ ಐ.ಟಿ.ಕೆಯಲ್ಲಿ ಬೆಳಿಗ್ಗೆ ೮ ಗಂಟೆಗೆ ಮತ ಎಣಿಕೆ ಆರಂಭಗೊಂಡಿದ್ದು ಅಂಚೆ ಮತದಾನದಲ್ಲಿ ಪೂಂಜರಿಗೆ ೧,೫೧೫ ಮತಗಳು ಲಭಿಸಿವೆ. ರಕ್ಷಿತ್‌ ಅವರಿಗೆ ೯೪೮ ಮತಗಳು ಬಿದ್ದಿವೆ. ಪ್ರಾರಂಭದ ಸುತ್ತಿನಿಂದ ೧೮ ನೇ ಸುತ್ತಿನವರೆಗೂ ಪೂಂಜ ಅವರು ಮುನ್ನಡೆಯನ್ನು ಕಾಯ್ದುಕೊಂಡು ಬಂದಿದ್ದರು. ಇಲ್ಲಿ ಪೂಂಜ ಅವರಿಗೆ ನೇರ ಸ್ಪರ್ಧಿ ಕಾಂಗ್ರೇಸ್ಸೇ ಆಗಿತ್ತು.

ಪಕ್ಷದ ನಿರೀಕ್ಷೆಯಂತೆ ಮತ ಬೀಳದಿರುವುದು ಆಶ್ಚರ್ಯ ತಂದಿದೆ. ಪಕ್ಷವು ಬಿಜೆಪಿಗೆ ೧,೨೦,೦೦೦ ಕ್ಕಿಂತಲೂ ಅಧಿಕ ಮತಗಳು ಸಿಗಲಿವೆ ಎಂದು ಲೆಕ್ಕಾಚಾರ ಹಾಕಿತ್ತು. ಕಳೆದ ಐದು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮನಸೋತು ಮತ್ತು ಹಿಂದುತ್ವದ ಆಧಾರದ ಮೇಲೆ, ಪಕ್ಷ ಸಂಘಟನೆಯ ಆಧಾರದ ಹಾಗೂ ಅಭ್ಯರ್ಥಿಯ ವ್ಯಕ್ತಿತ್ವದ ಆಧಾರದ ಮೇಲೆ ೪೦ ಸಾವಿರದಿಂದ ೫೦ ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲವು ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಪರಿಣಾಮ ಬೇರೆಯೇ ಆಗಿದೆ. ಕಳೆದ ಬಾರಿ ಅಂದರೆ ೨೦೧೮ ರಲ್ಲಿ ಪೂಂಜರು ೯೮,೪೧೭ ಮತಗಳನ್ನು ಪಡೆದು ೨೨,೯೭೪ ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಾರಿ ಮತಗಳ ಅಂತರ ಕಳೆದ ಅವಧಿಗಿಂತ ೪,೭೫೮ ಮತಗಳು ಕಡಿಮೆಯಾಗಿವೆ.
೧೯೫೨ ರಿಂದ ೨೦೨೩ ರವರೆಗೆ ಬೆಳ್ತಂಗಡಿಯಲ್ಲಿ ೧೭ ಚುನಾವಣೆಗಳು ನಡೆದಿದ್ದು ಬಿಜೆಪಿ ೬ ನೇ ಬಾರಿಗೆ ಜಯಗಳಿಸಿದಂತಾಗಿದೆ. ಈ ಹಿಂದೆ ಬಿಜೆಪಿಯಿಂದ ವಸಂತ ಬಂಗೇರ ಎರಡು ಬಾರಿ, ಪ್ರಭಾಕರ ಬಂಗೇರ ಎರಡು ಬಾರಿ, ಹರೀಶ್‌ ಪೂಂಜ ಎರಡು ಬಾರಿ ಸ್ಪರ್ಧಿಸಿ ಜಯಗಳಿಸಿ ಶಾಸಕರಾಗಿದ್ದಾರೆ.

ಹರೀಶ್‌ ಪೂಂಜರಿಗೆ ಯಾಕೆ ಕಡಿಮೆ ಮತಗಳು ಲಭ್ಯವಾಗಿವೆ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ತಾಲೂಕಿನಲ್ಲಿ ಪಕ್ಷವು ಸಂಘಟನೆಯ ದೃಷ್ಟಿಯಲ್ಲಿ ಹಿಂದಿನಿಂದಲೂ ಸಕ್ಷಮವಾಗಿದೆ. ಕಾಂಗ್ರೇಸ್‌ಗಿಂತ ನಾಲ್ಕುಪಟ್ಟು ಹೆಚ್ಚು ಕಾರ್ಯಕರ್ತರಿದ್ದಾರೆ. ತಾಲೂಕಿನಿಂದ ಹಿಡಿದು ಬೂತ್‌ ಮಟ್ಟದವರೆಗೆ ವಿವಿಧ ಸಮಿತಿಗಳಿದ್ದು ಗಟ್ಟಿಯಾಗಿವೆ. ಸುಮಾರು ೨೦ ಸಾವಿರಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಮೂರು ನಾಲ್ಕು ಬಾರಿ ಮನೆ ಮನೆಗಳಿಗೆ ಓಡಾಡಿ ಮತದಾರರನ್ನು ಭೇಟಿಯಾಗಿದ್ದಾರೆ ಹಾಗೂ ಮತಯಾಚಿಸಿದ್ದಾರೆ. ಯಾವ ರೀತಿ ಶಿಸ್ತಿನಿಂದ ಕೆಲಸ ಮಾಡಬೇಕು ಅದರಂತೆ ಮಾಡಿದ್ದಾರೆ. ಕಾಂಗ್ರೇಸ್‌ ಪಕ್ಷದ ನೂರಾರು ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ಶಾಸಕರು ೩,೫೦೦ ಕ್ಕಿಂತಲೂ ಹೆಚ್ಚು ಅನುದಾನ ತಂದು ರಸ್ತೆ-ಸೇತುವೆ,, ನೀರು ಮತ್ತಿತರ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿದ್ದಾರೆ. ಪ್ರಚಾರಕ್ಕೆ ಅಸ್ಸಾಂ ಮುಖ್ಯಮಂತ್ರಿ, ನಾಯಕ ಅಣ್ಣಾಮಲೈ ಬಂದಿದ್ದಾರೆ. ನವ ಬೆಳ್ತಂಗಡಿಯ ಸಂಕಲ್ಪ ತೊಟ್ಟ ಶಾಸಕರು ಗೆದ್ದು ಸೋತಿದ್ದಾರೆ ಎಂಬ ವಿಶ್ಲೇಷಣೆ ಎಲ್ಲೆಡೆ ನಡೆಯುತ್ತಿದೆ. ೪೦ ರಿಂದ ೫೦ ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇವೆ ಎಂಬ ದೃಢವಿಶ್ವಾಸ ಕ್ಷೇತ್ರದ ನಾಯಕರಲ್ಲಿತ್ತು. ಹೀಗಿರುವಾಗ ಯಾರು ಕೈ ಕೊಟ್ಟು ಕೈ ಹಿಡಿದರು ಎಂಬ ಪ್ರಶ್ನೆ ಎದ್ದಿದೆ. ಬೆಳ್ತಂಗಡಿಯಲ್ಲಿ ಜಾತಿ ರಾಜಕಾರಣ ಹಿಂದಿನಿಂದಲೂ ನಡೆಯುತ್ತಿದೆ. ಬಿಲ್ಲವ ಹಾಗೂ ಒಕ್ಕಲಿಗರ ಮತಗಳ ಆಧಾರದಲ್ಲಿ ಅಭ್ಯರ್ಥಿಗಳು ಗೆಲ್ಲುವ ಪರಿಪಾಠವಿದೆ. ಈ ಬಾರಿ ಬಿಲ್ಲವರು ಕೈ ಹಿಡಿದರೆ ಅಥವಾ ಒಕ್ಕಲಿಗರು ಕೈ ಕೊಟ್ಟರೆ ? ಎಂಬ ಮಾತು ನಡೆಯುತ್ತಿದೆ. ಇನ್ನೊಂದೆಡೆ ಬಿಜೆಪಿಯ ಸ್ಥಳೀಯ ಕಾರ್ಯಕರ್ತರ ದಬ್ಬಾಳಿಕೆಗಳಿಗೆ ಬೇಸರಿಸಿಕೊಂಡು ಮತದಾರರು ಕಾಂಗ್ರೇಸ್‌ ಕಡೆ ವಾಲಿದ್ದಾರೆ ಎನ್ನಲಾಗುತ್ತಿದೆ. ತಾಲೂಕಿನ ೪೮ ಗ್ರಾಮ ಪಂಚಾಯತಿಗಳಲ್ಲಿ ೪೨ ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಇದೆ. ಇಲ್ಲಿ ಆಡಳಿತ ವಿರೋಧಿ ಬಾವನೆ ಇತ್ತು. ಅದು ಈ ಬಾರಿಯ ಚುನಾವಣೆಯಲ್ಲಿ ಅಡ್ಡ ಪರಿಣಾಮ ಬೀರಿದೆ ಎಂದೂ ಹೇಳಲಾಗುತ್ತಿದೆ. ಶಾಸಕರ ಹೆಸರು ಹೇಳಿಕೊಂಡು ಕಾರ್ಯಕರ್ತರು ಮಾಡಿದ ಅಡ್ಡ ಕೆಲಸಗಳು ಜನರಿಗೆ ಬೇಸರ ತರಿಸಿದೆ. ಮತದಾರರಿಗೆ ಇಂತಹ ವಿಚಾರಗಳು ಉಗುಳಲೂ ಅಲ್ಲ, ನುಂಗಲೂ ಅಲ್ಲ ಎಂಬಂತೆ ಆಗಿತ್ತು. ಕೊನೆಗೆ ಮತವೇ ಅಸ್ತ್ರವಾಗಿ ಈ ರೀತಿಯ ಹಿನ್ನಡೆ ಆಗಿದೆ ಎಂಬ ಸಂಗತಿ ಜಿಜ್ಞಾಸೆಗೆ ಕಾರಣವಾಗಿದೆ.

ದೇಶದ ಚುನಾವಣಾ ಇತಿಹಾಸದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದವರು ಸೋತದ್ದೂ ಇದೆ. ಏನೂ ಅಭಿವೃದ್ಧಿ ಮಾಡದವರು ಹಲವಾರು ಬಾರಿ ಗೆದ್ದದ್ದೂ ಇದೆ. ನಾಮಪತ್ರ ಸಲ್ಲಿಕೆಯ ವೇಳೆ, ರೋಡ್‌ಶೋಗಳಿಗೆ ಸೇರುವ ಜನರನ್ನು ನೋಡಿ ಭಾರೀ ಅಂತರದಿಂದ ಗೆಲ್ಲುವ ಮುನ್ಸೂಚನೆ ಇದು ಎಂದು ತಿಳಿದುಕೊಳ್ಳುವುದು ತಪ್ಪು ಎಂಬುದನ್ನು ಹಾಗೂ ಸೋಲು ಗೆಲುವಿಗೆ ಅಭಿವೃದ್ಧಿಯೇ ಮಾನದಂಡವಾಗಲಾರದು ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ.

Sneha Gowda

Recent Posts

ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಬಂದು ನಂಜುಂಡೇಶ್ವರನ ದರ್ಶನ ಪಡೆದ ನಟ ದುನಿಯಾ ವಿಜಯ್

ಬೆಂಗಳೂರಿನಿಂದ ನಂಜನಗೂಡಿಗೆ ಕಾಲ್ನಡಿಗೆಯಲ್ಲಿ ಹೊರಟು ನಂಜುಂಡೇಶ್ವರ ದೇವರ ದರ್ಶನವನ್ನು ನಟ ದುನಿಯಾ ವಿಜಯ್ ಪಡೆದಿದ್ದಾರೆ.

3 mins ago

ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ

ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ ಮಾಡಿದೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿಗೆ ಚಂಡಮಾರುತ ಹಾಗೂ…

24 mins ago

ಇವಿಎಂ ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಫೋಟ

ಇವಿಎಂ‌ ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಫೋಟಗೊಂಡ ಘಟನೆ ಕೋಲಾರದ ವಡಗೂರ್ ಗೇಟ್ ಬಳಿ ನಡೆದಿದೆ. ಮುಳಬಾಗಿಲಿನಿಂದ ಕೋಲಾರದ‌ ಸ್ಟ್ರಾಂಗ್…

40 mins ago

ಮತ್ತೆ ತಾಳ ತಪ್ಪಿದ “ಶ್ರುತಿ” ಹಾಸನ್ ಲೈಫ್

ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್ ತಮ್ಮ ಬಹು ಕಾಲದ ಗೆಳೆಯನಿಂದ ದೂರ ಉಳಿದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಗೂಗಲ್​…

53 mins ago

ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ

ಇರಾನ್ ಜೊತೆ ವಹಿವಾಟು ಹೊಂದಿರುವ ಆರೋಪದ ಮೇರೆಗೆ ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ…

1 hour ago

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಹಿಂದೇಟು: ಹೈಕೋರ್ಟ್ ತರಾಟೆ

ಕಳೆದ ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

1 hour ago