News Karnataka Kannada
Monday, April 29 2024
ಕರಾವಳಿ

ಸಜಿಪನಡುವಿನಲ್ಲಿ ಮನೆಯನ್ನೇ ಮೇಲಕ್ಕೆತ್ತಿ ನೆರೆಹಾವಳಿಯಿಂದ ಮುಕ್ತಿ…!

Photo Credit :

ಸಜಿಪನಡುವಿನಲ್ಲಿ ಮನೆಯನ್ನೇ ಮೇಲಕ್ಕೆತ್ತಿ ನೆರೆಹಾವಳಿಯಿಂದ ಮುಕ್ತಿ...!

ಬಂಟ್ವಾಳ: ವಾಹನದ ಟಯರ್ ಪಂಕ್ಚರ್ ಆದಾಗ ಅದನ್ನು ಬದಲಾಯಿಸಲು ಜಾಕ್ ಬಳಸುವುದನ್ನು ನೋಡಿದ್ದೇವೆ. ಆದರೆ ಮನೆಯನ್ನೇ ಮೇಲಕ್ಕೆತ್ತಲು ಜಾಕ್ ಬಳಸುತ್ತಾರೆಂದರೆ ನಂಬಲು ಸಾಧ್ಯವೇ? ಆದರೆ ನಂಬಲೇ ಬೇಕು. ಸಜಿಪನಡು ಗ್ರಾಮದಲ್ಲಿ ಇಂತಹಾ ಕುತೂಹಲಕಾರಿ ಕಾಮಗಾರಿ ನಡೆಯುತ್ತಿದ್ದು, ಇದೀಗ ಈ ವೈಜ್ಞಾನಿಕ ಕಾಮಗಾರಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

ಇಲ್ಲಿನ ಬೈಲಗುತ್ತು ನಿವಾಸಿ ರಿಯಾಝ್ ಎಂಬವರ ಮನೆ ಇದೀಗ ಈ ವೈಜ್ಞಾನಿಕ ಕಾಮಗಾರಿಗೆ ಒಳಪಡುತ್ತಿದ್ದು, ಮೊದಲಿದ್ದ ಸ್ಥಳದಿಂದ ನಾಲ್ಕು ಫೀಟ್ ಎತ್ತರಕ್ಕೆ ಏರಲಿದೆ. ಭಾರೀ ಮಳೆಯ ಸಂದರ್ಭ ಇಲ್ಲಿನ ಬೈಲಗುತ್ತು ಹಾಗೂ ಬೊಳಮೆಯ ತಗ್ಗು ಪ್ರದೇಶಗಳಲ್ಲಿ ನೆರೆಬರುವುದು ಸಾಮಾನ್ಯವಾಗಿದ್ದು, ಈ ನೆರೆಯಿಂದ ಮುಕ್ತಿ ಹೊಂದಲು ರಿಯಾಝ್ ಈ ವೈಜ್ಞಾನಿಕ ತಂತ್ರದ ಮೊರೆ ಹೊಕ್ಕಿದ್ದಾರೆ..

ಏನಿದು ಕಾಮಗಾರಿ..?
ದೆಹಲಿ ಮೂಲದ ಹರಿ ಓಂ ಶಿವ ಹೌಸ್ ಲಿಫ್ಟಿಂಗ್ ಕನ್‍ಸ್ಟ್ರಕ್ಷನ್ ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ವಾಹನಗಳ ರಿಪೇರಿಗೆ ಬಳಸುವಂತಹ ದೊಡ್ಡ ಜಾಕ್ ಗಳನ್ನು ಬಳಸಿ ಮನೆಯನ್ನು ಮೇಲಕ್ಕೆತ್ತುವುದು ಈ ಕಾಮಗಾರಿಯ ಸ್ವಾರಸ್ಯಕರ ಸಂಗತಿ. ಮನೆಯ ಗೋಡೆ ಕುಸಿಯದ ರೀತಿಯಲ್ಲೇ ಲಿಫ್ಟ್ ಮಾಡಲಾಗುತ್ತದೆ. ಗೋಡೆಗಳ ಇಕ್ಕೆಲಗಳ ನೆಲವನ್ನು ಅಗೆದು ಪಾಯದ ಕಲ್ಲನ್ನು ಶೋಧಿಸಿ, ನಿರ್ದಿಷ್ಟ ಕಲ್ಲುಗಳನ್ನು ತೆರವುಗೊಳಿಸಲಾಗುತ್ತದೆ. ಅಡಿಭಾಗಕ್ಕೆ ಕಬ್ಬಿಣದ ಪ್ಲೇಟ್ ಅಳವಡಿಸಿ ನೆಲದಿಂದ ಜಾಕ್ ಅಳವಡಿಸಿ ನಿಧಾನವಾಗಿ ಮೇಲಕ್ಕೆತ್ತುವ ಪ್ರಕ್ರಿಯೆ ನಡೆಸಲಾಗುತ್ತದೆ. ಮನೆ ಎಷ್ಟೇ ಚದರ ಅಡಿ ವಿಸ್ತೀರ್ಣವಿದ್ದರೂ ಎಲ್ಲೆಡೆಯಿಂದಲೂ ಏಕಕಾಲದಲ್ಲಿ ಜಾಕ್ ಮೂಲಕ ಎತ್ತರಿಸಬೇಕಾದ್ದು ಇಲ್ಲಿನ ಮುಖ್ಯ ತಂತ್ರ. ಎತ್ತುವಿಕೆಯಲ್ಲಿ ಸ್ವಲ್ಪ ಎಡವಿದರೂ ಗೋಡೆ, ಛಾವಣಿ, ಕಂಬಗಳಲ್ಲಿ ಬಿರುಕು ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಹಳ ಜಾಗರೂಕತೆಯಿಂದ ಈ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಈ ಸಂಸ್ಥೆಯ ಕಾರ್ಮಿಕರು.

ಸದ್ಯಕ್ಕೆ ಒಂದೂವರೆ ಫೀಟ್ ನಷ್ಟು ಮನೆಯನ್ನು ಮೇಲಕ್ಕೆತ್ತಲಾಗಿದ್ದು, ಇನ್ನೂ ಎರಡೂವರೆ ಫೀಟ್ ಎತ್ತರಿಸುವ ಗುರಿ ಇರಿಸಲಾಗಿದೆ. ಈಗಾಗಲೇ ಸುಮಾರು 180 ಕ್ಕೂ ಅಧಿಕ ಜಾಕ್‍ಗಳನ್ನು ಬಳಸಲಾಗಿದೆ, ಮನೆಯನ್ನು ನಿರ್ದಿಷ್ಟ ಎತ್ತರಕ್ಕೆ ಏರಿಸಿದ ಬಳಿಕ ಕಲ್ಲುಗಳನ್ನು ಕಟ್ಟಿ ಜಾಕ್ ಗಳನ್ನು ಕಳಚಲಾಗುತ್ತದೆ. ರಿಯಾಝ್ ಅವರ ಸಹೋದರನ ಮನೆಯನ್ನೂ ಮೇಲಕ್ಕೆತ್ತುವ ಕಾಮಗಾರಿಗೆ ಚಾಲನೆ ಸಿಗಲಿದೆ.

ಕರ್ನಾಟಕದಲ್ಲಿ ಪ್ರಥಮ ಬಾರಿ..
ಹರಿಓಂ ಶಿವ ಹೌಸ್ ಲಿಫ್ಟಿಂಗ್ ಸಂಸ್ಥೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ಕಾಮಗಾರಿ ನಡೆಸಿದ್ದು, ಈವರೆಗೆ ದೆಹಲಿ, ಕೇರಳ, ಬಿಹಾರ, ಅಸ್ಸಾಂ ಮೊದಲಾದೆಡೆಗಳಲ್ಲಿ ಸಾವಿರಕ್ಕೂ ಅಧಿಕ ಮನೆಗಳನ್ನು ಲಿಫ್ಟಿಂಗ್ ಹಾಗೂ ಶಿಫ್ಟಿಂಗ್ ಮಾಡಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಮೇಲ್ವಿಚಾರಕ ಗೋಕರನ್ ಸಿಂಹ್. ಚದರ ಅಡಿಗೆ ಅನುಗುಣವಾಗಿ ಕಾಮಗಾರಿಯ ವೆಚ್ಚ ನಿಗದಿಯಾಗುತ್ತದೆ ಎಂದ ಅವರು, ಸುಮಾರು 30 ದಿನಗಳಲ್ಲಿ ಒಂದು ಮನೆಯ ಲಿಫ್ಟಿಂಗ್ ಕಾಮಗಾರಿ ನಡೆಸುತ್ತೇವೆ ಎಂದು ಪತ್ರಿಕೆಯ ಜೊತೆಗೆ ಅನಿಸಿಕೆ ಹಂಚಿಕೊಂಡಿದ್ದಾರೆ.

ನೆರೆಹಾವಳಿ ಪ್ರದೇಶಗಳಿಗೆ ಹೆಚ್ಚು ಉಪಕಾರಿ..
ನೆರೆರಾಜ್ಯಗಳಲ್ಲಿ ಕಂಡು ಬರುತ್ತಿದ್ದ ಈ ತಂತ್ರಜ್ಞಾನ ಇದೇ ಮೊದಲಬಾರಿಗೆ ಕರಾವಳಿ ಭಾಗದಲ್ಲೂ ಕಂಡು ಬರುತ್ತಿರುವುದು ಸ್ಥಳೀಯವಾಗಿ ಅಚ್ಚರಿ ಮೂಡಿಸಿದೆ. ಜಾಕ್ ಮೂಲಕ ಮನೆಯನ್ನೇ ಮೇಲಕ್ಕೆತ್ತುವ ಕಾಮಗಾರಿಯ ಸುದ್ದಿಯನ್ನು ಕೇಳಿ, ವಿವಿಧ ಊರುಗಳಿಂದ ಈ ಮನೆಯ ಕಡೆ ಹೆಜ್ಜೆ ಹಾಕಲು ಆರಂಭಿಸಿದ್ದಾರೆ. ನದಿ ತಡಗಳಲ್ಲಿ ವಾಸ್ತವ್ಯವಿದ್ದು, ಪ್ರತೀವರ್ಷವೂ ನೆರೆ ಹಾವಳಿಗೆ ಒಳಗಾಗುವ ತಗ್ಗು ಪ್ರದೇಶದ ನಿವಾಸಿಗಳಿಗೆ ಹೌಸ್ ಲಿಫ್ಟಿಂಗ್ ಪರಿಹಾರ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಮನೆಯನ್ನೇ ಕೆಡವಿ ಕಟ್ಟುವುದಕ್ಕಿಂದ ಇದ್ದ ಮನೆಯನ್ನೇ ಮೇಲಕ್ಕೆತ್ತಲು ಕಡಿಮೆ ಹಣ ಸಾಕು. ಹೀಗಾಗಿ ಈ ತಂತ್ರಜ್ಞಾನ ಹೆಚ್ಚು ಉಪಕಾರಿಯಾಗಬಲ್ಲುದು.

ನಮ್ಮ ಪರಿಸರದ ಮನೆಗಳು ಪ್ರತೀವರ್ಷ ನೆರೆ ಹಾವಳಿಯಲ್ಲಿ ಸುಮಾರು 3 ಫೀಟ್ ನಷ್ಟು ಮುಳುಗಡೆಯಾಗುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಹೊಂದುವ ಸಲುವಾಗಿ ಮನೆಯನ್ನೇ ಜಾಕ್ ಮೂಲಕ ಮೇಲೆತ್ತುವ ತಂತ್ರಜ್ಞಾನದ ಮೊರೆಹೋಗಿದ್ದೇವೆ. ಪಕ್ಕದಲ್ಲೇ ಇರುವ ಸಹೋದರನ ಮನೆಗೂ ಈ ತಂತ್ರಜ್ಞಾನದ ಕಾಮಗಾರಿ ನಡೆಸುತ್ತೇವೆ ಎನ್ನುತ್ತಾರೆ ಮನೆ ಮಾಲಕ ಮಹಮ್ಮದ್ ರಿಯಾಝ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು