News Karnataka Kannada
Monday, April 15 2024
Cricket
ಕರಾವಳಿ

ಬೆಳ್ತಂಗಡಿ: ಬೋಜಾರ ನಿವಾಸಿಗಳ‌ ಕತೆ- ವ್ಯಥೆ

Photo Credit :

ಬೆಳ್ತಂಗಡಿ: ಬೋಜಾರ ನಿವಾಸಿಗಳ‌ ಕತೆ- ವ್ಯಥೆ

ಬೆಳ್ತಂಗಡಿ: ದಶಕಗಳಿಂದ ಕೃಷಿ ಚಟುವಟಿಕೆ ಸೇರಿದಂತೆ ಹೈನುಗಾರಿಕೆಯನ್ನೇ ಜೀವಾಳವಾಗಿಸಿದ ನಡ ಗ್ರಾಮದ ಮೂಡಾಯಿಬೆಟ್ಟು ಬೋಜಾರ ನಿವಾಸಿಗಳಿಗೆ ರಸ್ತೆ ಹಾಗೂ ಕಿಂಡಿ ಅಣೆಕಟ್ಟು ಸಂಪರ್ಕವೇ ಮುಳುವಾಗಿ ಪರಿಣಮಿಸಿದೆ.

ನಡ ಗ್ರಾಮದ ಪ್ರಸಿದ್ಧ ಪ್ರವಾಸಿ ತಾಣ ಗಡಾಯಿಕಲ್ಲು ತೆರಳುವ ರಸ್ತೆಯಲ್ಲಿ ಸಿಗುವ ಮಂಜೊಟ್ಟಿ ಸಮೀಪ ಸೋಮಾವತಿ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಕಿರಿದಾಗಿದ್ದು ಘನ ವಾಹನಗಳ ಸಾಗಾಟಕ್ಕೆ ಯೋಗ್ಯವಾಗಿಲ್ಲ. ಇದೇ ಹಾದಿಯಾಗಿ ಬಲಕ್ಕೆ ತೆರಳುವಾಗ ಮೂಡಾಯಿಬೆಟ್ಟು ಪ್ರಾಥಮಿಕ ಶಾಲೆ, ಅಂಗನವಾಡಿಗೆ ಹಾಲಿನ ಡೇರಿಗೆ ತೆರಳುವ ತೆರಳುವ 1.5 ಕಿ.ಮೀ.ರಸ್ತೆ ತೀರ ಹದಗೆಟ್ಟು ಸಂಚಾರ ದುಸ್ತರವಾಗಿದೆ.

ಸುತ್ತಮುತ್ತ 150ಕ್ಕೂ ಅಧಿಕ ಮನೆಗಳಿದ್ದು ಶಾಶ್ವತ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಕಳೆದ 20 ವರ್ಷಗಳಿಂದಲೂ ಬೇಡಿಕೆಯೊಡ್ಡುತ್ತಾ ಬಂದಿದ್ದಾರೆ. 1992ರಲ್ಲಿ ಈ ರಸ್ತೆಗಳು ಅಲ್ಪಸ್ವಲ್ಪ ಡಾಮರೀಕರಣ ಕಂಡಿದ್ದು ಬಿಟ್ಟರೆ ಗ್ರಾ.ಪಂ. ನಿಂದಲೇ ನಿರ್ವಹಣೆ ಮಾಡಲಾಗುತ್ತಿದೆ.

ಬೋಜಾರದಲ್ಲಿ ಅವೈಜ್ಞಾನಿಕ ಕಿಂಡಿ ಅಣೆಕಟ್ಟು: ಇದೇ ರಸ್ತೆಯಾಗಿ ಮುಂದೆ ಸಾಗಿದರೆ ಬೋಜಾರಕ್ಕೆ ಸಂಪರ್ಕ ಕಲ್ಪಿಸುವ ಸೋಮಾವತಿ ನದಿಗೆ ಪ್ರಥಮವಾಗಿ 1980ರಲ್ಲಿ ಕಟ್ಟಿದ ಕಿಂಡಿಅಣೆಕಟ್ಟೊಂದು ಈಗಲೋ ಆಗಲೋ ಎಂಬ ಸ್ಥಿತಿಗೆ ತಲುಪಿದೆ. ಸೋಮಾವತಿ ಆರಂಭದಲ್ಲಿ ಸಿಗುವ ಸುಮಾರು 4 ಅಡಿ ಅಗಲ 80 ಅಡಿ ಉದ್ದದ ಕಿಂಡಿ ಅಣೆಕಟ್ಟು 1995 ರಲ್ಲಿ ಮೇಲ್ದರ್ಜೆಗೆ ಏರಿಸಲಾದರೂ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಮರಮಟ್ಟುಗಳು ಕೊಚ್ಚಿಬಂದು ಸಿಲುಕಿಕೊಳ್ಳುತ್ತಿದ್ದು ಕುಸಿತ ಭೀತಿ ಎದುರಿಸುತ್ತಿದೆ. ಬೋಜಾರದ 35ಕ್ಕೂ ಅಧಿಕ ಕುಟುಂಬಗಳು ಜತೆಗೆ ಎಸ್.ಟಿ. ಕಾಲನಿ ಸೇರಿ 200ಕ್ಕೂ ಅಧಿಕ ಮಂದಿ ಇದೇ ಕಿಂಡಿ ಅಣೆಕಟ್ಟು ಅವಲಂಬಿಸಿದ್ದಾರೆ. ಕಳೆದ ಮಳೆಗಾಲದಲ್ಲಿ ಒಂದು ಭಾಗದ ಸಂಪರ್ಕ ರಸ್ತೆ ಕುಸಿತದಿಂದ ಇದೀಗ ಅಡಿಕೆ ಪಾಲದ ಹಾಗೂ ಮರದ ಕಾಲುಸಂಕವಾಗಿ ಬಳಕೆ ಮಾಡಲಾಗುತ್ತಿದೆ.

ಜೋತು ನಡಿಗೆ: ಬೋಜಾರದ ನಿವಾಸಿಗಳು ಉತ್ತಮ ಹೈನುಗಾರರಾಗಿದ್ದು, 30ಕ್ಕೂ ಅಧಿಕ ಕುಟುಂಬಗಳು 200 ಲೀ. ಹಾಲು ಡಿಪೋಗೆ ನೀಡುತ್ತಿದ್ದಾರೆ. ಕಳೆದ ಮಳೆಗಾಲಕ್ಕೆ ಸೇತುವೆ ಸಮೀಪದ ರಾಮಚಂದ್ರ ಎಂಬುವರ 1 ಎಕ್ರೆಗೂ ಅಧಿಕ ಸ್ಥಳ ಕೊಚ್ಚಿ ಹೋಗಿದ್ದು, ಸೇತುವೆ ಸಮೀಪ 20 ಅಡಿಗಳಷ್ಟು ಭೂ ಪ್ರದೇಶ ಕೊಚ್ಚಿಹೋಗಿ ಸಂಪರ್ಕ ರಸ್ತೆ ಇಲ್ಲದಂತಾಗಿದೆ. ಇದರಿಂದ ಮೂಡಾಯಿಬೆಟ್ಟು ಶಾಲೆಗೆ ತೆರಳುವ 25ಕ್ಕೂ ಹೆಚ್ಚು ಪುಟಾಣಿ ಮಕ್ಕಳು, ಹೈನುಗಾರರು, ಅಥವಾ ಆರೋಗ್ಯ ಸಮಸ್ಯೆಯಾದಲ್ಲಿ ವಯಸ್ಸಾದವರು ಬೆಳ್ತಂಗಡಿ ತೆರಳಲು ಇದೇ ರಸ್ತೆ ಅವಲಂಬಿಸಿದ್ದಾರೆ. ಪಾಲದ ಸೇತುವೆ ಮುರಿದು ಬಿದ್ದಲ್ಲಿ ನೀರಲ್ಲಿ ಕೊಚ್ಚಿ ಹೋಗುವ ಆತಂಕ ನಿವಾಸಿಗಳದು.

15 ಕಿ.ಮೀ. ಸುತ್ತಿಬಳಸಿ ಬರುವ ಸಾಹಸ: ಆಸ್ಪತ್ರೆ ಸಮಸ್ಯೆಯಾದಲ್ಲಿ ಅಥವಾ ಕೃಷಿ ಉಪಕರಣ, ವಾಹನ ಸಾಗಾಟಕ್ಕೆ ಬೋಜಾರ ನಿವಾಸಿಗಳು ಮಂಜೊಟ್ಟಿ ತಲುಪಲು 2 ಕಿ.ಮೀ. ಇದೆ. ರಸ್ತೆ ಹಾಗೂ ಸೂಕ್ತ ಸೇತುವೆ ನಿರ್ಮಾಣವಾಗದೆ ಇರುವುದರಿಂದ ಬೋಜಾರದಿಂದ ಹತ್ಯಡ್ಕ- ಕೈಕಂಬ ರಸ್ತೆಯಾಗಿ ಸುಮಾರು 15 ಕಿ.ಮೀ. ಸುತ್ತಿಬಳಸಿ ಮಂಜೊಟ್ಟಿಗೆ ತಲುಪಬೇಕಿದೆ.

ಈಗಾಗಲೇ ಶಾಶಕ ಹರೀಶ್ ಪೂಂಜ ಅವರು ಗಡಾಯಿಕಲ್ಲು-ಪಡ್ಡಾಯಿ 350 ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನದಲ್ಲಿ ಶಿಲಾನ್ಯಾಸ ಮಾಡಲಾಗಿದ್ದು, ಬೂತ್‍ಮಟ್ಟದಲ್ಲೂ 10 ಲಕ್ಷ ರೂ. ಅನುದಾನ ಇರಿಸಲಾಗಿದೆ. ಉಳಿದ 1 ಕಿ.ಮೀ. ರಸ್ತೆಯೂ ಅಭಿವೃದ್ಧಿ ಕಾಣಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು