News Karnataka Kannada
Sunday, April 14 2024
Cricket
ಕರಾವಳಿ

ಬಂಟ್ವಾಳ ತಾಲೂಕು ಕ. ಸಾ. ಸಮ್ಮೇಳನದ ಕಾರ್ಯಾಧ್ಯಕ್ಷರಾಗಿದ್ದ ಉಳುವಾನ ಗಂಗಾಧರ ಭಟ್ ನಿಧನ

Photo Credit :

ಬಂಟ್ವಾಳ ತಾಲೂಕು ಕ. ಸಾ. ಸಮ್ಮೇಳನದ ಕಾರ್ಯಾಧ್ಯಕ್ಷರಾಗಿದ್ದ ಉಳುವಾನ ಗಂಗಾಧರ ಭಟ್ ನಿಧನ

ಬಂಟ್ವಾಳ: ಬಾಯಾರು ಗ್ರಾಮದ ಉಳುವಾನ ಮೂಲದ ತ್ಯಾಗ ಜೀವಿ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷರಾದ ಉಳುವಾನ ಗಂಗಾಧರ ಭಟ್ಟ (90) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೆಲದಿನಗಳ ಹಿಂದೆ ಹೃದಯಸಂಬಂಧಿ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಪರೀಕ್ಷೆ ವೇಳೆ ಕೊರೋನಾ ಸೋಂಕು ಧೃಡಪಟ್ಟಿದ್ದು, ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗುತ್ತಿತ್ತು. ಅಳಿಕೆ ಸಂಸ್ಥೆಯ ಮೂಲಕ ಸುಮಾರು 70 ವರ್ಷಗಳ ಸುದೀರ್ಘ ಸೇವೆಯನ್ನು ಸಮಾಜಕ್ಕೆ ನೀಡಿದ್ದಾರೆ.

1993ರಲ್ಲಿ ನಡೆದ ಬಂಟ್ವಾಳ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ, 2011ರಲ್ಲಿ ನಡೆದ ದ.ಕ. ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಸಾಹಿತ್ಯದ ಕಾರ್ಯ ನಡೆಸಿದ್ದರು. ಅಳಿಕೆ ಪಂಚಾಯತ್ ಹಾಗೂ ಸಹಕಾರಿ ಸಂಘದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಅಳಿಕೆ ಹಾಗೂ ಮುದ್ದೇನಹಳ್ಳಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅವರು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ, ಎರುಂಬು ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶ, ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕಲ್ಯಾಣ ಮಂಟಪದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಿಕ್ಷಣ ಸಂಸ್ಥೆಗಳನ್ನು ಮಾತ್ರವಲ್ಲದೆ, ಉಚಿತ ಆಸ್ಪತ್ರೆ, ಅನಾಥಾಲಯ, ಕೃಷಿ, ಪಶುಸಂಗೋಪನೆ, ಪುಸ್ತಕ ಪ್ರಕಾಶನ, ಪತ್ರಿಕಾ ಪ್ರಸಾರ, ಹಾಸ್ಟೆಲುಗಳು ಇತ್ಯಾದಿಗಳ ನಿರ್ವಹಣೆಯನ್ನು ಸಾಂಗವಾಗಿ ನಡೆಸಿಕೊಂಡು ಬಂದಿದ್ದಾರೆ.

1984ರಿಂದ 2015 ವರೆಗೆ ಕನ್ನಡ ಸನಾಥನ ಸಾರಥಿಯ ಸಂಪಾದಕರಾಗಿ, 1977 -1984ರವರೆಗೆ ಸೇವಾಮೃತ ಮಾಸ ಪತ್ರಿಕೆಯ ಸಂಪಾದಕರಾಗಿ, 2016 ರಿಂದ ಸಾಯಿ ಸೇವಾಮೃತದ ಸಂಪಾದಕರಾಗಿ, ಪುಟ್ಟಪರ್ತಿಯಲ್ಲಿ ಜರಗಿದ 50ನೇ ಸನಾಥನ ಸಾರಥಿಯ ಸಮ್ಮೇಳನದಲ್ಲಿ ರಾಷ್ಟ್ರೀಯ ಮಟ್ಟದ ಸನಾಥನ ಸಾರಥಿಯ ಸಲಹಾ ಮಂಡಳಿಯ ಸದಸ್ಯರಾಗಿದ್ದರು.

ಪ್ರತೀ ವರ್ಷ ಗಣೇಶ ಹಬ್ಬದಂದು ಹಲವು ಗಣ್ಯರನ್ನು ಆಮಂತ್ರಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ವಿಶೇಷವಾಗಿ ಆಚರಿಸುತ್ತಿದ್ದರು. ಬಡವರ ಬಗ್ಗೆ ವಿಶೇಷ ಕಾಳಜಿ ವಹಿಸಿ ವೈದ್ಯಕೀಯ ಚಿಕಿತ್ಸಾ ಶಿಬಿರ, ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದರು. ಹಿರಣ್ಯ ವೆಂಕಟೇಶ್ವರ ಭಟ್ ಅವರ ಸಂಪಾದಕತ್ವದಲ್ಲಿ ಗಂಗಾಧರ ಭಟ್ಟರ ‘ಗಂಗಾಧರ ಗೌರವ’ ಎಂಬ ಅಭಿನಂದನಾ ಗ್ರಂಥ ಬಿಡುಗಡೆಯಾಗಿದೆ.

ಆರಂಭದಲ್ಲಿ ಕೃಷಿ ವಿಭಾಗದ ಮುಖ್ಯಸ್ಥರಾಗಿದ್ದು, 1960ರಲ್ಲಿ ಆರಂಭವಾದ ಲೋಕ ಸೇವಾ ವೃಂದದಲ್ಲಿ ಕಾರ್ಯದರ್ಶಿಯಾಗಿದ್ದರು. 1977ರ ಜನವರಿಯಲ್ಲಿ ಸಂಸ್ಥೆಯ ಸಕಲ ಚರ, ಸ್ಥಿರ ಸೊತ್ತುಗಳನ್ನು ಸ್ವಾಮಿಯ ಪದತಲಕ್ಕೆ ಅರ್ಪಿಸಿ ಲೋಕಸೇವಾ ಸಂಸ್ಥೆಯ ಸ್ಥಾಪಕಾರಾದ  ನಾರಾಯಣ ಭಟ್ಟ ಇಹಲೋಕ ತ್ಯಜಿಸಿದ ಬಳಿಕ 1978ರಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು ಲೋಕಸೇವಾ ವೃಂದವನ್ನು ಅಧಿಕೃತವಾಗಿ ಸ್ವೀಕರಿಸಿದರು.  ನಂತರ ಅಳಿಕೆ ಮತ್ತು ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಗೆ ಗಂಗಾಧರ ಭಟ್ಟರು ಅಧ್ಯಕ್ಷರಾಗಿ ಕಾರ್ಯ ಆರಂಭಿಸಿದರು. ನಾರಾಯಣ ಭಟ್ಟರ ಕಲ್ಪನೆ ಬೀಜವಾಗಿದ್ದ ಸಂಸ್ಥೆಯನ್ನು ಚಿಗುರೊಡೆಯುವಂತೆ ಮಾಡಿ ಹೆಮ್ಮರವಾಗಿ ಬೆಳೆಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು.

1962ರಲ್ಲಿ ಚೀನಾ ಆಕ್ರಮಣದ ಸಮಯದಲ್ಲಿ ಸೈನಿಕ ನಿಧಿಗೆ ಸಹಾಯ ಮಾಡಲು ಗಂಗಾಧರ ಭಟ್ಟರಲ್ಲಿ ಏನೂ ಇರಲಿಲ್ಲ. ಸಂಬಳವಿಲ್ಲದ ಅಧ್ಯಾಪಕ, ಸಂಬಳ ರಹಿತ ಕಾರ್ಯದರ್ಶಿ, ತನ್ನ ಕಿವಿಯಲ್ಲಿದ್ದ ಒಂಟಿಯನ್ನು (ಕಿವಿಯ ಆಭರಣ) ಯಾವುದೇ ಲೋಚನೆ ಇಲ್ಲದೆ ಬಿಚ್ಚಿ ದಾನ ಮಾಡಿ ಉದಾರತೆ ಮೆರೆದಿದ್ದನ್ನು ಅವರ ಆಪ್ತರು ಈಗಲೂ ಸ್ಮರಿಸುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು