News Karnataka Kannada
Saturday, April 20 2024
Cricket
ಕರಾವಳಿ

ಕೋವಿಡ್ ಕಾಲದಲ್ಲಿ ರಸ್ತೆ ರಾಜಕಾರಣ

Photo Credit :

ಕೋವಿಡ್ ಕಾಲದಲ್ಲಿ ರಸ್ತೆ ರಾಜಕಾರಣ

ಮಂಗಳೂರು: ನಗರಪಾಲಿಕೆ ವ್ಯಾಪ್ತಿಯ ಹಂಪನಕಟ್ಟೆಯಿಂದ ತೊಡಗಿ ಲೈಟ್‍ಹೌಸ್ ಮೂಲಕ ಸಾಗಿ ಅಂಬೇಡ್ಕರ್ ವೃತ್ತದವರೆಗಿನ ರಸ್ತೆಯನ್ನು `ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರು ನಾಮಕರಣ ಮಾಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ವಾಸ್ತವದಲ್ಲಿ ಈ ರಸ್ತೆಗೆ 1976ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಶ್ರೀ ಬ್ಲೇಸಿಯಸ್ ಡಿ ಸೋಜಾ ಅವರ ಅಧ್ಯಕ್ಷತೆಯಲ್ಲಿ ನಾಮಕರಣ ಮಾಡಿತ್ತು. ಆದರೆ 2017ರಲ್ಲಿ ಈ ರಸ್ತೆಯನ್ನು `ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರು ನಾಮಕರಣ ಮಾಡುವ ಬಗ್ಗೆ ಮಂಗಳೂರು ಮಹಾನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಂಡು ಅಂಗೀಕಾರಕ್ಕೆ ರಾಜ್ಯ ಸರಕಾರಕ್ಕೆ ಮನವಿಯನ್ನು ಕಳುಹಿಸಿತ್ತು. ರಾಜ್ಯ ಸರಕಾರ ಇದಕ್ಕೆ ಅನುಮತಿಯನ್ನು ನೀಡಿತ್ತು. ಆ ಸಂದರ್ಭದಲ್ಲಿ ಸಂತ ಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಅವರು ಈಗಾಗಲೇ ಅಸ್ತಿತ್ವದಲ್ಲಿರುವ ಹೆಸರೊಂದನ್ನು ಬದಲಿಸುವ ಸರಕಾರದ ನಿರ್ಧಾರಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿ ಸರಕಾರದ ಈ ಆದೇಶಕ್ಕೆ ತಡೆಯನ್ನು ತರುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ರಸ್ತೆಯ ಮರು ನಾಮಕರಣದ ಕುರಿತಾದ ಸಮಸ್ಯೆಯನ್ನು ಸೌಹಾರ್ದಯುತವಾಗಿ  ಪರಿಹಸುವ ಬಗ್ಗೆ ವಿಜಯ ಬ್ಯಾಂಕ್‍ನ ಉದ್ಯೋಗಿಗಳ ಸಂಘದ ಜೊತೆಗೆ ಎಲ್ಲ ಬಗೆಯ ಮಾತುಕತೆಗೆ ಸಂತ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿ ಸಿದ್ಧವಿದೆ ಎಂಬುದನ್ನು ಆಡಳಿತ ಮಂಡಳಿ ನಿರಂತರವಾಗಿ ಹೇಳುತ್ತಲೇ ಬಂದಿದೆ. ಆದರೆ ಈಗ ಮತ್ತೆ ಕೋವಿಡ್ ಸಾಂಕ್ರಾಮಿಕತೆಯ ಈ ದುರಿತ ಕಾಲದಲ್ಲಿ ರಾಜ್ಯ ಸರಕಾರ ಈ ವಿವಾದಿತ ರಸ್ತೆಗೆ `ಮೂಲ್ಕಿ ಸುಂದರರಾಮ ರಸ್ತೆ’ ಎಂಬುದಾಗಿ ನಾಮಕರಣ ಮಾಡಲು ಹೊರಟಿರುವುದು ನಮಗೆ ಆಘಾತವನ್ನು ತಂದಿದೆ. 

ಅವಿಭಜಿತ ದಕ್ಷಿಣ ಕನ್ನಡ ಕನ್ನಡ ಜಿಲ್ಲೆಯಲ್ಲಿ ವಿನೂತನ ಬಗೆಯ ಶೈಕ್ಷಣಿಕ ಇತಿಹಾಸವನ್ನು ಹೊಂದಿರುವ ಸಂತ ಅಲೋಶಿಯಸ್ ಕಾಲೇಜು ಈ ದೇಶದ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವಾತ್ಮಕ ಸಿದ್ಧಾಂತ ಮತ್ತು ಆಶಯಗಳಿಗೆ ಪೂರಕವಾಗಿ ಬಹುರೂಪೀ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಲಾಗಾಯ್ತಿನಿಂದಲೂ ನೀಡುತ್ತಲೇ ಬಂದಿದೆ. ನಮ್ಮ ದೇಶ ಮತ್ತು ವಿದೇಶದ ಅನೇಕ ಮುಖ್ಯ ಸಂಸ್ಥೆಗಳಲ್ಲಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನವನ್ನು ಪಡೆದುಕೊಂಡಿರುವುದು ಈ ಜಿಲ್ಲೆಗೆ ಸಂದ ಹೆಮ್ಮೆ ಮತ್ತು ಗೌರವವಾಗಿದೆ. 1880ರಿಂದ ತೊಡಗಿ ಇಲ್ಲಿಯವರೆಗೂ ಈ ಸಂಸ್ಥೆ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತ ಸಮಾಜಕ್ಕೆ ನೀಡುತ್ತಲೇ ಬಂದಿದೆ. ಟಿ.ಎಂ.ಎ. ಪೈ, ಜಾರ್ಜ್ ಫೆರ್ನಾಂಡೀಸ್, ಕೆ. ವೇಣುಗೋಪಾಲ್, ವಿನಯ್ ಹೆಗ್ಡೆ, ಜಸ್ಟಿಸ್ ಸಂತೋಷ್ ಹೆಗ್ಡೆ, ಕೆ.ವಿ. ಕಾಮತ್ ಹೀಗೆ ಅನೇಕ ಪ್ರತಿಭಾನ್ವಿತರನ್ನು ರೂಪಿಸಿದ ಕೀರ್ತಿ ನಮ್ಮ ಸಂಸ್ಥೆಯದ್ದು. ಹಾಗಾಗಿ ಮಂಗಳೂರು ನಗರದ ಹೃದಯಭಾಗದಲ್ಲಿ ಕಳೆದ 140 ವರ್ಷಗಳಿಂದ ಈ ಕಾಲೇಜು ಕಂಗೊಳಿಸುತ್ತಿದೆ. ದೇಶ ವಿದೇಶಗಳ ಶೈಕ್ಷಣಿಕ ಆಸಕ್ತರು ಇಂದಿಗೂ ಈ ಸಂಸ್ಥೆಯ ಶೈಕ್ಷಣಿಕ ಕಾರ್ಯಕ್ರಮಗಳ ಭಾಗವಾಗಲು ಇಚ್ಛಿಸುತ್ತಿದ್ದಾರೆ. ಇಂಥಾ ಅಮೋಘ ಇತಿಹಾಸವಿರುವ ಈ ಸಂಸ್ಥೆಯ ಕೀರ್ತಿಯನ್ನು ಗಮನಿಸಿಕೊಂಡೇ ಅಂದು ಸನ್ಮಾನ್ಯ ಎಂ. ಬ್ಲೇಸಿಯಸ್ ಡಿಸೋಜಾ ಅವರು ಈ ಲೈಟ್‍ಹೌಸ್ ರಸ್ತೆಗೆ `ಸಂತ ಅಲೋಶಿಯಸ್ ಕಾಲೇಜ್ ರಸ್ತೆ’ ಎಂಬುದಾಗಿ ನಾಮಕರಣ ಮಾಡಿದ್ದರು.  ಆದರೆ ಎರಡು ವರ್ಷಗಳ ಹಿಂದೆ ಏಕಾಏಕಿ ರಸ್ತೆ ಪುನರ್ ನಾಮಕರಣದ ಪ್ರಸ್ತಾವ ಬಂದಿತ್ತು. 

ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಚರಿತ್ರೆಯನ್ನು ಗಮನಿಸಿದರೆ ಈ ಜಿಲ್ಲೆ ಬಹುರೂಪೀ ಜನಸಮುದಾಯಗಳ ಆಚಾರ-ವಿಚಾರಗಳ ಸಂಲಗ್ನತೆಯಲ್ಲಿ, ವಿಭಿನ್ನ ಸಂಸ್ಕೃತಿಗಳ ಕೊಡುಕೊಳ್ಳುವಿಕೆಯಲ್ಲಿ ಬಾಳುತ್ತ, ಬದುಕ ಕಟ್ಟುತ್ತ ಬಂದಿದೆ. ಸಾಂಸ್ಕೃತಿಕ ಸೌಹಾರ್ದತೆ ಈ ಜಿಲ್ಲೆಯ ಅನನ್ಯತೆಯಾಗಿದೆ. ಪರಸ್ಪರ ಗೌರವ, ನಂಬಿಕೆ, ಪ್ರೀತಿ-ವಿಶ್ವಾಸ ಈ ನೆಲದ ಗಟ್ಟಿ ತತ್ತ್ವವಾಗಿದೆ. ಇಂಥಾ ಸಾಂಸ್ಕೃತಿಕ ಇತಿಹಾಸವಿರುವ ಜಿಲ್ಲೆಯ ಶಾಂತಿ-ಸೌಹಾರ್ದತೆಯ ಅಡಿಪಾಯವನ್ನು ಮತ್ತು ಈಗಾಗಲೇ ಜನಸಮುದಾಯಗಳ ನಡುವೆ ಆಲವಾಗಿ ಬೇರು ಬಿಟ್ಟಿರುವ ಪ್ರೀತಿ-ವಿಶ್ವಾಸದ ಬೇರುಗಳನ್ನು ಸರಕಾರ ತನ್ನ ವಿಚ್ಛಿದ್ರಕಾರಿ ನೀತಿ ನಿರೂಪಣೆಯ ಮೂಲಕ ಸಡಿಲಗೊಳಿಸಲು ಹೊರಟಿರುವುದು ಅತ್ಯಂತ ಅಸಾಧುವಾದುದಾಗಿದೆ.  ಇದೀಗ ರಾತ್ರಿ ಬೆಳಗಾಗುವುದರೊಳಗಾಗಿ ರಸ್ತೆಗಳ ಮರುನಾಮಕರಣದ ಕಾರ್ಯಯೋಜನೆ ಎಂಬುದು ಜಿಲ್ಲೆಯ ಗಟ್ಟಿ ಸಾಮಾಜಿಕ ಬಂಧದ ವಿಘಟನೆಗೆ ಕಾರಣವಾಗುವ ಸಾಧ್ಯತೆ ಢಾಳಾಗಿ ಕಾಣುತ್ತಿದೆ. ಈ ಹೊತ್ತು ಸಾಕಷ್ಟು ಸಂಕಷ್ಟದ ಕಾಲವಾಗಿದೆ. ಜನ ಕೋವಿಡ್ ಸಾಂಕ್ರಾಮಿಕತೆಯಲ್ಲಿ ತಮ್ಮ ರಕ್ಷಣೆಯ ಕಡೆಗೆ ವಿಶೇಷವಾಗಿ ಗಮನ ಹರಿಸುತ್ತಿದ್ದಾರೆ. ಇಂಥಾ ಕಠಿಣ ಪರಿಸ್ಥಿತಿಯಲ್ಲಿ ಪ್ರಭುತ್ವದ ಕಾಳಜಿ ಪ್ರಜೆಗಳ ಯೋಗಕ್ಷೇಮದ ಕಡೆಗೆ ಹರಿಯಬೇಕಾಗಿದೆ. ಆದರೆ ಸರಕಾರ ಅದನ್ನು ಬದಿಗೆ ಸರಿಸಿ ಈಗಾಗಲೇ ನಾಮಕರಣಗೊಂಡಿರುವ ಹಳೆಯ ಹೆಸರುಗಳನ್ನು ಬದಲಿಸುವ ಕಾರ್ಯಯೋಜನೆಗೆ ಹೊರಟಿರುವುದು ಅತ್ಯಂತ ಖೇದಕರವಾದ ಸಂಗತಿಯಾಗಿದೆ. ಹಾಗಾಗಿ ಸರಕಾರ ಪ್ರಜೆಗಳ ಆಶೋತ್ತರಗಳ ಈಡೇರಿಕೆ ಮತ್ತು ವಿಭಿನ್ನ ಜನಸಮುದಾಯಗಳ  ಭಾವನೆಗಳನ್ನು ಗೌರವಿಸುವ ನೆಲೆಯಲ್ಲಿ ತಾನು ನಡೆಸಲು ಹೊರಟಿರುವ ಮರುನಾಮಕರಣ ಆಪರೇಶನ್ ಕಾರ್ಯತಂತ್ರವನ್ನು ಕೈಬಿಟ್ಟು ಪ್ರಜಾಪ್ರಭುತ್ವಾತ್ಮಕ ಆಶಯಗಳ ಹಿನ್ನೆಲೆಯಲ್ಲಿ ತೀವ್ರವಾದ ನಾಗರಿಕ ಪ್ರಜ್ಞೆಯನ್ನು ವ್ಯಕ್ತಪಡಿಸಬೇಕು. ಈ ಮೂಲಕ ಈ ಜಿಲ್ಲೆಯ ನಾಗರಿಕರಿಗೆ ಸಾಮಾಜಿಕ ನ್ಯಾಯವನ್ನು ಮತ್ತು ಶಾಂತಿಯುತ ಬದುಕನ್ನು ಕಟ್ಟಿಕೊಳ್ಳಲು ಸುಂದರ ವಾತಾವರಣವನ್ನು ನಿರ್ಮಿಸಿಕೊಡುವಂತೆ ವಿನಂತಿಸುತ್ತೇವೆ.

ರೆ. ಫಾ. ಮೆಲ್ವಿನ್ ಜೋಸೆಫ್ ಪಿಂಟೋ

ರೆಕ್ಟರ್

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು, ಮಂಗಳೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು