News Karnataka Kannada
Tuesday, April 23 2024
Cricket
ಕರಾವಳಿ

ಕೊಡಗು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಕಳಗಿ ಕೊಲೆ ಆರೋಪಿ ಹತ್ಯೆ

Photo Credit :

ಕೊಡಗು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಕಳಗಿ ಕೊಲೆ ಆರೋಪಿ ಹತ್ಯೆ

ಮಡಿಕೇರಿ: ಇಲ್ಲಿಗೆ ಸಮೀಪದ ಸುಳ್ಯದಲ್ಲಿ ಬೆಳ್ಳಂ ಬೆಳಿಗ್ಗೆ ನೆತ್ತರು ಚೆಲ್ಲಿದೆ. ಇಲ್ಲಿನ ಶಾಂತಿ ನಗರದಲ್ಲಿ ವಾಸಿಸುತಿದ್ದ ಮರಳು ವ್ಯಾಪಾರಿ ಮೂಲತಃ ಸಂಪಾಜೆ ಕಲ್ಲುಗುಂಡಿಯ ನಿವಾಸಿ ಸಂಪತ್ ಎಂಬಾತನನ್ನು ಇಂದು ಮುಂಜಾನೆ ಮುಸುಕುಧಾರಿಗಳು ಬೆನ್ನಟ್ಟಿಕೊಂಡು ಹೋಗಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಇಂದು ಹತ್ಯೆಗೀಡಾದ ಸಂಪತ್‌ ಕೊಡಗು ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಆಗಿದ್ದ ಸಂಪಾಜೆಯ ಬಾಲಚಂದ್ರ ಕಳಗಿ ಎಂಬುವವರ ಕೊಲೆಯ ಮುಖ್ಯ ಆರೋಪಿ ಆಗಿದ್ದ.

ಸಂಪತ್ ಕೆಲ ತಿಂಗಳ ಹಿಂದೆ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರ ಬಂದಿದ್ದ. ಕಲ್ಲು ಮತ್ತು ಮರಳು ವ್ಯಾಪಾರಸ್ಥರಾಗಿದ್ದ ಆತ ಎಂದಿನಂತೆ ತನ್ನ ವ್ಯವಹಾರದಲ್ಲಿ ತೊಡಗಿಕೊಂಡಿದ್ದ. ಕೆಲವೊಮ್ಮೆ ಆತ ಸುಳ್ಯದ ಶಾಂತಿ ನಗರದಲ್ಲಿರುವ ರಾಮಕೃಷ್ಣ ಎಂಬವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ಎನ್ನಲಾಗಿದೆ. ನಿನ್ನೆಯೂ ಆತ ಶಾಂತಿನಗರದಲ್ಲಿ ಉಳಿದುಕೊಂಡಿದ್ದ. ಅ.8ರಂದು ಮುಂಜಾನೆ 6.30 ಕ್ಕೆ ಆತ ತನ್ನ ಕಾರಲ್ಲಿ ಹೊರಟು ಬರುತಿದ್ದಾಗ ಐದಾರು ಮಂದಿ ಮುಸುಕುಧಾರಿಗಳು ಆತನ ಕಾರನ್ನು ಅಡ್ಡಗಟ್ಟಿ ಕಾರಿನ ಗಾಜಿಗೆ ಹೊಡೆದರು ಎನ್ನಲಾಗಿದೆ. ಅಪಾಯವನ್ನು ಅರಿತ ಸಂಪತ್ ಕಾರಿನಿಂದಿಳಿದು ತನ್ನ ಮನೆ ಕಡೆಗೆ ಓಡಿದ.ಆ ವೇಳೆಗೆ ಮುಸುಕುಧಾರಿಗಳು ಕೋವಿಯಿಂದ ಆತನ ಬೆನ್ನಿಗೆ ಗುಂಡಿಕ್ಕಿದ್ದರೆಂದು ಹೇಳಲಾಗಿದೆ.

ಗುಂಡೇಟು ತಿಂದ ಆತ ತಾನಿರುವ ಮನೆಗೆ ಹೋಗದೆ ಪಕ್ಕದಲ್ಲಿರುವ ಇನ್ನೊಂದು ಮನೆಗೆ ಹೊಕ್ಕಿದನು. ಅಲ್ಲಿಗೂ ಅಟ್ಟಾಡಿಸಿಕೊಂಡು ಬಂದ ಮುಸುಕುಧಾರಿಗಳು ಮನೆಯೊಳಗೆ ಹೊಕ್ಕು ಮತ್ತೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ನಡೆಯುವಾಗ ಮನೆಯವರು ಬೆದರಿ ಹೊರಗೋಡಿ ಬಂದರು. ಮನೆಯಲ್ಲಿದ್ದ ತಿಮ್ಮಪ್ಪ ಎಂಬುವರು ಮುಸುಕುಧಾರಿಗಳನ್ನು ತಡೆಯಲು ಯತ್ನಿಸಿದಾಗ ಅವರು ತಿಮ್ಮಪ್ಪರ ಕೈಗೆ ಕತ್ತಿಯಿಂದ ಕಡಿದಿದ್ದಾರೆ ಎನ್ನಲಾಗಿದೆ.

ಗುಂಡೇಟಿನಿಂದ ತೀವ್ರ ಗಾಯಗೊಂಡ ಸಂಪತ್ ಮನೆಯೊಳಗಡೆ ಮೃತಪಟ್ಟರು. ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ಚಂದ್ರ ಜೋಗಿ, ಎಸ್.ಐ. ಹರೀಶ್ ಎಂ.ಆರ್. ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಬಿಗಿ ಬಂದೋಬಸ್ತ್ ಮಾಡಿದ್ದಾರೆ. 

ಗಡಿ ಭಾಗ ಸಂಪಾಜೆಯ ಜನಾನುರಾಗಿ ನಾಯಕನಾಗಿದ್ದ ಬಾಲಚಂದ್ರ ಕಳಗಿ (42) ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಅಗಿದ್ದರು. ಗಡಿ ಭಾಗದಲ್ಲಿ ನಡೆಯುತಿದ್ದ ಅಕ್ರಮ ಕಲ್ಲು ಮತ್ತು ಮರಳು ಗಣಿಗಾರಿಕೆಯನ್ನು ಇವರು ವಿರೋಧಿಸುತಿದ್ದರು. ಇದೇ ಕಾರಣಕ್ಕೆ ಆರೋಪಿ ಸಂಪತ್‌ ತನ್ನ ಅಕ್ರಮ ಮರಳುಗಾರಿಕೆಗೆ ಅಡ್ಡಿಯಾಗಿದ್ದಾರೆ ಎಂದು ದ್ವೇಷ ಸಾಧಿಸುತಿದ್ದ. ನಂತರ 2019 ರ ಮಾರ್ಚ್‌ 19 ರಂದು ಕಳಗಿ ಅವರು ಮಡಿಕೇರಿಯಿಂದ ಸಂಪಾಜೆಯ ಮನೆಗೆ ರಾತ್ರಿ ಕಾರಿನಲ್ಲಿ ಬರುತಿದ್ದಾಗ ಎದುರಿನಿಂದ ಬಂದ ಲಾರಿಯೊಂದು ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತ ಪಟ್ಟಿದ್ದರು. ಆದರೆ ಕಳಗಿ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದರು. ನಂತರ ಪೋಲೀಸರು ಸಂಪತ್‌ (35) ಆತನ ಸಹಚರರಾದ ಹರಿ ಪ್ರಸಾದ್‌ (36) ಮತ್ತು ಲಾರಿ ಚಾಲಕ ಜಯನ್‌ (34) ಎಂಬುವವರನ್ನು ಬಂಧಿಸಿ ಕೊಲೆ ಪ್ರಕರಣ ಭೇದಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು