News Karnataka Kannada
Wednesday, April 17 2024
Cricket
ಕರಾವಳಿ

ಎಸ್.ಡಿ.ಎಂ ಅಂತರರಾಷ್ಟ್ರೀಯ ವರ್ಚುವಲ್ ಕಾನ್ಫರೆನ್ಸ್

Photo Credit :

ಎಸ್.ಡಿ.ಎಂ ಅಂತರರಾಷ್ಟ್ರೀಯ ವರ್ಚುವಲ್ ಕಾನ್ಫರೆನ್ಸ್

ಉಜಿರೆ: ಇಡೀ ಜಗತ್ತನ್ನು ಸ್ಥಗಿತಗೊಳಿಸಿದ ಕೋವಿಡ್-19 ಸಮಸ್ಯೆಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಸೇರಿದಂತೆ ಮುಂಬರುವ ದಿನಗಳಲ್ಲಿ ಎದುರಾಗಲಿರುವ ವಿವಿಧ ಬಗೆಯ ಬಿಕ್ಕಟ್ಟುಗಳ ಯಶಸ್ವಿ ನಿರ್ವಹಣೆಯ ಪರ್ಯಾಯಗಳನ್ನು ಹೊಳೆಸುವ ನಿಟ್ಟಿನಲ್ಲಿ ರಸಾಯನಶಾಸ್ತ್ರದ ಅನ್ವಯಿಕ ಸಂಶೋಧನಾ ಜ್ಞಾನ ಬಳಕೆಯಾಗಬೇಕಿದೆ ಎಂದು ಯು.ಎಸ್.ಎ ಕ್ಯಾಲಿಫೋರ್ನಿಯಾದ ನೊರಾಕ್ ಫಾರ್ಮಾ ಅಧ್ಯಕ್ಷ ಡಾ.ಡ್ಯಾನಿ ಲೆವಿನ್ ಅಭಿಪ್ರಾಯಪಟ್ಟರು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗವು ‘ರಾಸಾಯನಿಕ ವಿಜ್ಞಾನದಲ್ಲಿ ಸೃಜನಾತ್ಮಕ ಸಂಶೋಧನೆ ಮತ್ತು ಸಂಯೋಜಿತ ಅನ್ವಯಿಕತೆ’ ಶೀರ್ಷಿಕೆಯಡಿ ಆಯೋಜಿಸಿದ ಎರಡು ದಿನಗಳ ಅಂತರರಾಷ್ಟ್ರೀಯ ವರ್ಚುವಲ್ ಕಾನ್ಫರೆನ್ಸ್‍ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನ ಆಶಯ ನುಡಿಗಳನ್ನು ಅವರು ಪ್ರಸ್ತುತಪಡಿಸಿದರು.

ಕೋವಿಡ್ 19 ಬಿಕ್ಕಟ್ಟು ಎದುರಾದ ನಂತರ ಒಂದು ಅನ್ವಯಿಕ ಜ್ಞಾನಶಿಸ್ತಾಗಿ ರಸಾಯನಶಾಸ್ತ್ರವು ಸಾಮುದಾಯಿಕ ಜವಾಬ್ದಾರಿಯನ್ನು ಅಂತರರಾಷ್ಟ್ರೀಯ ನೆಲೆಯಲ್ಲಿ ನಿರ್ವಹಿಸಬೇಕಿದೆ. ಭವಿಷ್ಯದಲ್ಲಿ ಎದುರಾಗಲಿರುವ ಇಂಥದ್ದೇ ಬಿಕ್ಕಟ್ಟುಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವೈದ್ಯಕೀಯ ಮತ್ತು ವೈಜ್ಞಾನಿಕ ವಲಯವನ್ನು ಮತ್ತಷ್ಟು ಪ್ರಬಲಗೊಳಿಸುವ ಸಂಶೋಧನಾತ್ಮಕ ಕಾಣ್ಕೆಗಳನ್ನು ನೀಡುವ ಶಕ್ತಿ ರಸಾಯನಶಾಸ್ತ್ರಕ್ಕಿದೆ. ಈ ಜ್ಞಾನಶಿಸ್ತನ್ನು ವಿವಿಧ ವಲಯಗಳು ಎದುರುಗೊಳ್ಳುವ ಬಿಕ್ಕಟ್ಟುಗಳ ಸಮರ್ಥ ನಿರ್ವಹಣೆಯ ಮಾರ್ಗೋಪಾಯಗಳನ್ನು ಹೊಳೆಸಿಕೊಳ್ಳುವುದಕ್ಕೆ ಬಳಸಿಕೊಳ್ಳಬೇಕಿದೆ. ಅನ್ವಯಿಕ ಸಂಶೋಧನಾ ಪ್ರಯೋಗಗಳಿಂದ ಇದು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಆರೋಗ್ಯ, ಆಹಾರ ಸೇರಿದಂತೆ ಜನಬದುಕಿಗೆ ನೆರವಾಗುವ ಪ್ರತಿಯೊಂದು ಕ್ಷೇತ್ರಗಳಿಗೂ ರಸಾಯನಶಾಸ್ತ್ರದ ಅನ್ವಯಿಕ ಜ್ಞಾನ ಬಳಕೆಯಾಗುತ್ತದೆ. ವಿಸ್ತೃತ ಸಂಶೋಧನೆಯ ಸಹಾಯದೊಂದಿಗೆ ಆಯಾ ಕಾಲದ ಅಗತ್ಯಗಳಿಗೆ ಸ್ಪಂದಿಸುವಂಥ ಪರಿಹಾರ ಸಾಧ್ಯತೆ ಕಂಡರಿಸುವ ಕೊಡುಗೆಗಳನ್ನು ನೀಡುವುದಕ್ಕೆ ಹೊಸ ಪೀಳಿಗೆ ಮುಂದಾಗಬೇಕಿದೆ. ಹಾಗಾದಾಗ ಮಾತ್ರ ರಸಾಯನಿಕ ವಿಜ್ಞಾನ ಹೊಸದೊಂದು ಎತ್ತರ ಕಂಡುಕೊಳ್ಳುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಹೊಸ ಕಾಲದ ತಾಂತ್ರಿಕ ಆವಿಷ್ಕಾರಗಳ ಸಹಾಯದೊಂದಿಗೆ ರಸಾಯನಿಕ ವಿಜ್ಞಾನಕ್ಕೆ ಹೊಸ ಆಯಾಮ ನೀಡುವ ಪ್ರಯತ್ನಗಳು ವ್ಯಾಪಕವಾಗಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಕೋವಿಡ್ 19ನಂಥ ಮಾರಣಾಂತಿಕ ವೈರಸ್ ವಿವಿಧ ಜ್ಞಾನಶಿಸ್ತುಗಳನ್ನು ಪ್ರತಿನಿಧಿಸುವ ತಜ್ಞರು ಹೊಸದಾಗಿ ಆಲೋಚಿಸುವಂತೆ ಒತ್ತಡವನ್ನು ಸೃಷ್ಟಿಸಿದೆ. ಈ ಸಂದರ್ಭದಲ್ಲಿ ರಸಾಯನಶಾಸ್ತ್ರ ವಲಯವನ್ನು ಪ್ರತಿನಿಧಿಸುವವವರು ಸಂಶೋಧನೆಯನ್ನು ಸಮಾಜಮುಖಿಯಾಗಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಕಾಲೇಜಿನ ಪ್ರಾಚಾರ್ಯರಾದ ಡಾ.ಸತೀಶ್ಚಂದ್ರ ಎಸ್. ಮಾತನಾಡಿದರು. ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವೆಬಿನಾರ್ ಮೂಲಕ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ವರ್ಚುವಲ್ ಕಾನ್ಫರೆನ್ಸ್‍ನ ಸಂಯೋಜಕ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವಿಶ್ವನಾಥ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ನಫೀಸತ್ ಪಿ ಕಾರ್ಯಕ್ರಮ ನಿರ್ವಹಿಸಿದರು. ವರ್ಚುವಲ್ ಕಾನ್ಫರೆನ್ಸ್ ನ ಸಂಘಟನಾ ಕಾರ್ಯದರ್ಶಿ, ಸಹಾಯಕ ಪ್ರಾಧ್ಯಾಪಕಿ ಡಾ.ಶಶಿಪ್ರಭಾ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು