ರಾಯಚೂರು: ರಾಯಚೂರು ಜಿಲ್ಲೆಯ ಸಿರಿವಾರ ಪಟ್ಟಣದಲ್ಲಿ ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದರು. ಈ ಪ್ರಕರಣ ಸಂವಂಧ ಸಿರವಾರ ಪಟ್ಟಣ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ನಿವಾಸಿ ಆಕಾಶ್ (23) ಬಂಧಿತ ಆರೋಪಿ.
ಜನವರಿ 31ರಂದು ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ಮಟನ್ ಮಾರ್ಕೆಟ್ ಬಳಿ ಇರುವ ಟಿಪ್ಪು ಸರ್ಕಲ್ನಲ್ಲಿ ಹಾಕಲಾಗಿರುವ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಕಿಡಿಗೇಡಿಗಳು ರಾತ್ರೋರಾತ್ರಿ ಚಪ್ಪಲಿ ಹಾರ ಹಾಕಿದ್ದರು.
ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿರುವುದು ಕಂಡ ಮುಸ್ಲಿಮರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಅಲ್ಲದೆ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದ್ದರು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದರು.
ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಶಂಕಿತರನ್ನು ವಶಕ್ಕೆ ಪಡೆದರು. ಮೂವರು ಶಂಕಿತರನ್ನು ವಿಚಾರಣೆ ನಡೆಸಿದಾಗ ಆರೋಪಿ ಆಕಾಶ್ ತಪ್ಪೊಪ್ಪಿಕೊಂಡಿದ್ದಾನೆ.