News Karnataka Kannada
Monday, April 29 2024
ಬೀದರ್

ಗುಲಬರ್ಗಾ ವಿ.ವಿ : ವಿದ್ಯಾರ್ಥಿಗಳ ಕೈಸೇರದ ಅಂಕಪಟ್ಟಿ !

Gulbarga V.V.: Marksheets of students are not in their hands!
Photo Credit : News Kannada

ಕಲಬುರಗಿ (ಬೀದರ್): ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಕಲಬುರಗಿ, ಬೀದರ್, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಖಾಸಗಿ ಮತ್ತು ಸರ್ಕಾರಿ ಮಹಾವಿದ್ಯಾಲಯಗಳು, ಪ್ರಥಮ ದರ್ಜೆ ಕಾಲೇಜುಗಳು, ಸ್ನಾತಕೋತ್ತರ ಕೇಂದ್ರಗಳು, ವಿವಿಧ ಅಧ್ಯಯನ ವಿಭಾಗಗಳು ಸುಮಾರು ₹3.18 ಕೋಟಿ ಪರೀಕ್ಷಾ ಶುಲ್ಕ ಸೇರಿ ಇತರೆ ಶುಲ್ಕ ಬಾಕಿ ಉಳಿಸಿಕೊಂಡಿವೆ.

ಬಾಕಿ ಶುಲ್ಕ ವಸೂಲಿಗೆ ವಿ.ವಿ.ಯು ವಿದ್ಯಾರ್ಥಿಗಳ ಅಂಕಪಟ್ಟಿ ತಡೆಹಿಡಿದಿದೆ. ಪರೀಕ್ಷಾ ಮೌಲ್ಯಮಾಪನ ವಿಭಾಗದ ಈಚೆಗಿನ ಸುತ್ತೋಲೆಯಲ್ಲಿ 2022ರ ಏಪ್ರಿಲ್‌ನಿಂದ 2022 ಅಕ್ಟೋಬರ್ ನಡುವೆ ನಾಲ್ಕು ಜಿಲ್ಲೆಗಳಲ್ಲಿ ಬಾಕಿ ಶುಲ್ಕ ಉಳಿಸಿಕೊಂಡ ಮಹಾವಿದ್ಯಾಲಯಗಳು, ಪಿಜಿ ಕೇಂದ್ರಗಳು, ಅಧ್ಯಾಯನ ವಿಭಾಗಗಳ ವಿವರವನ್ನು ಹಂಚಿಕೊಂಡಿದೆ. ಇದರಲ್ಲಿ ಬೀದರ್ ಜಿಲ್ಲೆಗಳ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಬೀದರ್‌ನ ಬಿವಿಬಿ ಕಾಲೇಜು ₹11.55 ಲಕ್ಷ, ನೌಬಾದ್‌ನ ಪ್ರಥಮ ದರ್ಜೆ ಕಾಲೇಜು ₹7.61 ಲಕ್ಷ, ಹುಮನಾಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ₹3.38 ಲಕ್ಷ, ಸರ್ವೋದಯ ಪದವಿ ಕಾಲೇಜು ₹7.28 ಲಕ್ಷ, ಔರಾದ್(ಬಿ) ಪ್ರಥಮ ದರ್ಜೆ ಕಾಲೇಜು ₹4.36 ಲಕ್ಷ, ಎಂ.ಎಂ.ಜೆ. ಪದವಿ ಕಾಲೇಜು ₹6.61 ಲಕ್ಷ ಸೇರಿ ಇತರೆ ಕಾಲೇಜುಗಳು ₹50ರಿಂದ ₹11 ಲಕ್ಷದ ವರೆಗೆ ಬಾಕಿ ಶುಲ್ಕ ಕೊಟ್ಟಬೇಕಿದೆ.

ಕಲಬುರಗಿಯ ಎಂಎಸ್‌ಐ ಪದವಿ ಕಾಲೇಜು ₹4.3 ಲಕ್ಷ, ಎಸ್‌ಎಸ್‌ ಮರಗೋಳ ಕಾಲೇಜು ₹7.32 ಲಕ್ಷ, ಕಮಲಾಪುರದ ಪ್ರಥಮ ದರ್ಜೆ ಕಾಲೇಜು ₹4.22 ಲಕ್ಷ, ಯಾದಗಿರಿಯ ಶ್ರೀಸಿದ್ದಲಿಂಗೇಶ್ವರ ಪದವಿ ಕಾಲೇಜು, ₹5.30 ಲಕ್ಷ, ಶಹಾಪುರದ ವಿಶ್ವಜ್ಯೋತಿ ಪದವಿ ಕಾಲೇಜು ₹8.16 ಲಕ್ಷ, ರಾಯಚೂರು ಜಿಲ್ಲೆಯ ದೇವದುರ್ಗದ ಸ್ವಾಮಿ ವಿವೇಕಾನಂದ ಪದವಿ ಕಾಲೇಜು ₹1.99 ಲಕ್ಷ ಮತ್ತು ಜೆಎಂಎಸ್‌ ಕಾಲೇಜಿನಿಂದ ₹1.10 ಲಕ್ಷದಷ್ಟು ಬಾಕಿ ಇದೆ ಎಂದು ಸುತ್ತೋಲೆಯಲ್ಲಿ ಹೇಳಿದೆ.

ಕೋವಿಡ್‌ ಬಳಿಕ ವಿಶ್ವವಿದ್ಯಾಲಯಕ್ಕೆ ನಿರೀಕ್ಷಿಸಿದ್ದಷ್ಟು ಅನುದಾನ ಬರುತ್ತಿಲ್ಲ. ಮಹಾವಿದ್ಯಾಲಯಗಳು, ಸರ್ಕಾರದ ವಿವಿಧ ಇಲಾಖೆಗಳಿಂದ ಬರಬೇಕಾದ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಯ ಮೊತ್ತವೂ ವಿಶ್ವವಿದ್ಯಾಲಯದ ಖಾತೆ ಸೇರುತ್ತಿಲ್ಲ. ತನ್ನದೇ ಮೂಲದ ಸಂಪನ್ಮೂಲಗಳನ್ನು ಒಗ್ಗೂಡಿಸಿಕೊಂಡು ಶೈಕ್ಷಣಿಕ ಚಟುವಟಿಕೆಗಳು ನಡೆಸಿಕೊಂಡು ಹೋಗಬೇಕಾದ ನಿವಾರ್ಯತೆಗೆ ವಿ.ವಿ. ಸಿಲುಕಿದೆ. ವಿದ್ಯಾರ್ಥಿಗಳು ಶುಲ್ಕ ಕಟ್ಟಿದರೂ ಕೆಲವು ಕಾಲೇಜುಗಳು ವಿ.ವಿ.ಗೆ ಪಾವತಿಸಿಲ್ಲ. ಇದರ ಪರಿಣಾಮ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.

‘ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಕಾಲೇಜಗಳು ಸಕಾಲದಲ್ಲಿ ತಮ್ಮ ‍ಪಾಲಿನ ಶುಲ್ಕ ಕಟ್ಟದಿದ್ದರೆ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಹೊಡೆತ ಬೀಳಲಿದೆ. ಶೈಕ್ಷಣಿಕ ಚಟುವಟಿಗಳು ನಡೆಸಲು ಮತ್ತು ಗುಣಮಟ್ಟದ ಶಿಕ್ಷಣ ಕೊಡಲು ಕಷ್ಟವಾಗಲಿದೆ’‌ ಎನ್ನುತ್ತಾರೆ ನಿವೃತ್ತ ಪ್ರೊ. ವಿ.ಟಿ. ಕಾಂಬಳೆ.

‘ಈಚೆಗೆ ವಿದೇಶಿ ವಿಶ್ವವಿದ್ಯಾಲಯಗಳ ಜತೆಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದು, ಅದನ್ನು ಕಾರ್ಯಗತಗೊಳಿಸಲು ಹಿನ್ನಡೆ ಆಗಬಹುದು. ನಿಗದಿತ ಅವಧಿಯಲ್ಲಿ ಪರೀಕ್ಷೆ ನಡೆಸುವುದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಫಲಿತಾಂಶ ಪ್ರಕಟಣೆಗೂ ಅಡ್ಡಿಯಾಗಲಿದೆ. ಹೀಗಾಗಿ, ಕಾಲೇಜುಗಳು ಶುಲ್ಕ ಕಟ್ಟಿ, ಸರ್ಕಾರವೂ ತನ್ನ ಪಾಲಿನ ಹಣವನ್ನು ಕೊಡಬೇಕು’ ಎಂದರು-ಪ್ರೊ.ದಯಾನಂದ ಅಗಸರ.

ವಿದ್ಯಾರ್ಥಿಗಳು ಶುಲ್ಕ ಕಟ್ಟಿದರೂ ಕಾಲೇಜು ಆಡಳಿತ ಮಂಡಳಿ ವಿಶ್ವವಿದ್ಯಾಲಯಕ್ಕೆ ತಂದು ಕಟ್ಟಿಲ್ಲ. ಕಡಿಮೆ ಮೊತ್ತ ಬಾಕಿ ಉಳಿಸಿಕೊಂಡ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಕೊಡಲಾಗುತ್ತಿದೆ- ಪ್ರೊ. ಜ್ಯೋತಿ ಧಮ್ಮ ಪ್ರಕಾಶ್ ಮೌಲ್ಯಮಾಪನ ಕುಲಸಚಿವ.

‘ಬಾರದ ವಿದ್ಯಾರ್ಥಿ ವಿನಾಯಿತಿ ಶುಲ್ಕ ಮೊತ್ತ’ ‘ಕಳೆದ 2 ವರ್ಷಗಳಲ್ಲಿ ಎಸ್‌ಟಿ ಎಸ್‌ಟಿ ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಯ ಮೊತ್ತವು ಸಂಬಂಧಪಟ್ಟ ಆಯಾ ಇಲಾಖೆಗಳಿಂದ ವಿಶ್ವವಿದ್ಯಾಲಯಕ್ಕೆ ಸರಿಯಾಗಿ ಬರುತ್ತಿಲ್ಲ. ಈ ಬಗ್ಗೆ ಸರ್ಕಾರ ಸಚಿವರು ಉನ್ನತ ಶಿಕ್ಷಣ ಇಲಾಖೆಯ ಗಮನಕ್ಕೂ ತರಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಾಲ್ಕು ಇಲಾಖೆಗಳ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಪ್ರಕ್ರಿಯೆ ಭಿನ್ನವಾಗಿದೆ. ಒಂದು ಇಲಾಖೆಯಿಂದ ವಿನಾಯಿತಿ ಹಣವು ವಿದ್ಯಾರ್ಥಿಯ ಖಾತೆಗೆ ಹೋದರೆ ಮತ್ತೊಂದು ಇಲಾಖೆಯದ್ದು ಕಾಲೇಜಿನ ಖಾತೆಗೆ ಹೋಗುತ್ತಿದೆ. ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡಿದ್ದು ಇದೆ. ಇದನ್ನು ಸರಳೀಕರಣ ಮಾಡುವಂತೆ ಮನವಿ ಮಾಡಿದ್ದೇವೆ’ ಎಂದರು. ‘ವಿದ್ಯಾರ್ಥಿಗಳು ಶುಲ್ಕ ಕಟ್ಟಿದ್ದರೂ ಕೆಲವು ಕಾಲೇಜುಗಳ ಪ್ರಾಂಶುಪಾಲರು ಅದನ್ನು ವಿಶ್ವವಿದ್ಯಾಲಯಕ್ಕೆ ಪಾವತಿಸಿಲ್ಲ. ಕೆಲವು ವಿದ್ಯಾರ್ಥಿಗಳ ಶುಲ್ಕ ಕಟ್ಟದೆ ನ್ಯಾಯಾಲಯಕ್ಕೆ ಹೋಗಿ ಪರೀಕ್ಷೆ ಬರೆದಿದ್ದಾರೆ. ಹೀಗಾಗಿ ಜಿಲ್ಲಾ ಮತ್ತು ಕಾಲೇಜುವಾರು ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶುಲ್ಕ ಕಟ್ಟಿದ ರಸೀದಿ ತೋರಿಸಿದರೆ ಅವರಿಗೆ ನೇರವಾಗಿ ಅಂಕಪಟ್ಟಿ ಕೊಡುತ್ತಿದ್ದೇವೆ. ಕಟ್ಟದವರ ಮಾಹಿತಿಯನ್ನು ಪ್ರಾಂಶುಪಾಲರಿಗೆ ನೀಡಲಾಗಿದೆ’ ಎಂದು ವಿವರಿಸಿದರು.

ಪಿ.ಜೆ ಅಧ್ಯಯನ ವಿಭಾಗಗಳಿಂದ ಹೆಚ್ಚು ಶುಲ್ಕ ಬಾಕಿ! ವಿಶ್ವವಿದ್ಯಾಲಯ ಅಧೀನದ ಸ್ನಾತಕೋತ್ತರ(ಪಿ.ಜಿ) ಕೇಂದ್ರಗಳು ವಿವಿಧ ಅಧ್ಯಯನ ವಿಭಾಗಗಳಿಂದಲೂ ಹೆಚ್ಚಿನ ಶುಲ್ಕ ಬಾಕಿ ಉಳಿದಿದೆ ಎಂಬುದು ಸುತ್ತೋಲೆಯಿಂದ ತಿಳಿದುಬಂದಿದೆ. ಬೀದರ್ ರಾಯಚೂರು ಹಾಗೂ ಆಳಂದ ಪಿ.ಜಿ. ಕೇಂದ್ರಗಳು ಕ್ರಮವಾಗಿ ₹4 ಲಕ್ಷ ₹7.07 ಲಕ್ಷ ಹಾಗೂ ₹96 ಸಾವಿರ ಉಳಿಸಿಕೊಂಡಿವೆ. ಗುಲಬರ್ಗಾ ಕ್ಯಾಂಪಸ್‌ನ ಗಣಿತ ಅಧ್ಯಯನ ವಿಭಾಗ ₹1.02 ಲಕ್ಷ ಸಮಾಜಶಾಸ್ತ್ರ ಅಧ್ಯಯನ ವಿಭಾಗ ₹1.31 ಲಕ್ಷ ಕನ್ನಡ ಅಧ್ಯಯನ ವಿಭಾಗ ₹1.46 ಲಕ್ಷ ಇತಿಹಾಸ ವಿಭಾಗ ₹1.27 ಲಕ್ಷ ಅರ್ಥಶಾಸ್ತ್ರ ಅಧ್ಯಯನ ವಿಭಾಗ ₹1.52 ಲಕ್ಷ ಹಾಗೂ ವಾಣಿಜ್ಯ ಅಧ್ಯಯನ ವಿಭಾಗ ₹1.16 ಲಕ್ಷ ಶುಲ್ಕ ಕಟ್ಟಬೇಕು. ‘ಪಿ.ಜಿ. ಕೇಂದ್ರಗಳು ಹಾಗೂ ಅಧ್ಯಯನ ವಿಭಾಗಗಳ ಜತೆಗೆ ಸಂಬಂಧಪಟ್ಟ ಕಾಲೇಜುಗಳ ಶುಲ್ಕವೂ ಸೇರಿದೆ. ಹೀಗಾಗಿ ಅವುಗಳ ಬಾಕಿ ಮೊತ್ತ ಹೆಚ್ಚಾಗಿದೆ’ ಎಂದು ವಿ.ವಿ. ಕುಲಪತಿ ಪ್ರೊ.ದಯಾನಂದ ಅಗಸರ ಸ್ಪಷ್ಟನೆ ಕೊಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು