News Karnataka Kannada
Sunday, April 14 2024
Cricket
ಬೀದರ್

ಎಲ್ಲೋ ಕುಳಿತು ಮಾಡಿರುವ ಜಾತಿ ಜನಗಣತಿ ಒಪ್ಪಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

'ಕಲ್ಯಾಣ ಕರ್ನಾಟಕ ಪ್ರಥಮ ಲಿಂಗಾಯತ ದೀಕ್ಷ ಪಂಚಮಸಾಲಿ ಸಮಾವೇಶ ಕಲಬುರಗಿಯ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಮಾ. 12ರಂದು ಹಮ್ಮಿಕೊಳ್ಳಲಾಗಿದೆ' ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
Photo Credit : News Kannada

ಬೀದರ್: ‘ಕಲ್ಯಾಣ ಕರ್ನಾಟಕ ಪ್ರಥಮ ಲಿಂಗಾಯತ ದೀಕ್ಷ ಪಂಚಮಸಾಲಿ ಸಮಾವೇಶ ಕಲಬುರಗಿಯ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಮಾ. 12ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಸಮುದಾಯದ ಸ್ವಾಮೀಜಿಗಳು, ರಾಜಕೀಯ ಪ್ರತಿನಿಧಿಗಳು, ಕಲ್ಯಾಣ ಕರ್ನಾಟಕದ ಲಿಂಗಾಯತ ಸಮುದಾಯ ಎಲ್ಲಾ ಒಳಪಂಗಡದವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ನೀಡಬೇಕು. ಎಲ್ಲಾ ಲಿಂಗಾಯತ ಒಳ ಪಂಗಡಗಳಿಗೂ ಒಬಿಸಿ 2ಎ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿ ಈಗಾಗಲೇ ಬೆಳಗಾವಿ,ಗದಗ, ದಾವಣಗೆರೆ, ಶಿವಮೊಗ್ಗ ಸೇರಿದಂತೆ 11 ಜಿಲ್ಲೆಗಳಲ್ಲಿ ಸಮಾವೇಶ ನಡೆಸಲಾಗಿದೆ. ಗೃಹಸಚಿವ ಅಮಿತ್‌ ಷಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಕೊಟ್ಟು ಹಲವು ತಿಂಗಳಾದರೂ ಕ್ರಮ ಕೈಗೊಂಡಿಲ್ಲ. ಎಲ್ಲೆಡೆ ಸಮಾವೇಶಗಳನ್ನು ಆಯೋಜಿಸಿ ಜಾಗೃತಿ ಮೂಡಿಸಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರ ಮಾಡಿಸಿದ ಜಾತಿ ಜನಗಣತಿ ವರದಿಯನ್ನು ವೀರಶೈವ ಲಿಂಗಾಯತ ಸಮಾಜ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಎಲ್ಲೋ ಕುಳಿತು ಮಾಡಿರುವ ಜಾತಿ ಜನಗಣತಿ ವರದಿ ಒಪ್ಪಲು ಸಾಧ್ಯವೇ ಇಲ್ಲ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಈಗಾಗಲೇ ವಿರೋಧಿಸಿದೆ. ರಾಜ್ಯದಲ್ಲಿ 1 ಕೋಟಿ 30 ಲಕ್ಷ ಜನಸಂಖ್ಯೆ ಹೊಂದಿರುವ ಲಿಂಗಾಯತ ಒಳಪಂಗಡಗಳಲ್ಲಿ 94 ಪಂಗಡಗಳನ್ನು ಬಿಟ್ಟು ಬರೀ 19 ಪಂಗಡಗಳನ್ನು ವರದಿಯಲ್ಲಿ ಸೇರಿಸಲಾಗಿದೆ. ಬಹುಸಂಖ್ಯಾತ ಲಿಂಗಾಯತರು ಇರುವ ಕರ್ನಾಟಕದಲ್ಲಿ ಅವೈಜ್ಞಾನಿಕ ಜಾತಿ ಜನಗಣತಿ ವರದಿ ಒಪ್ಪಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ರಾಜ್ಯದ ಹಲವು ಭಾಗಗಳಲ್ಲಿ ಲಿಂಗಾಯತ ಸಮುದಾಯವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ನಮ್ಮ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಯಾವುದೇ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ನಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು. ಕೇಂದ್ರ ಸರ್ಕಾರ ಲಿಂಗಾಯತ ಒಳ ಪಂಗಡಗಳಿಗೆ ಒಬಿಸಿ 2ಎ ಪಟ್ಟಿಯಲ್ಲಿ ಸೇರಿಸಬೇಕು. ಕೂಡಲೇ ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ರಾಜಕುಮಾರ ತರಿ, ಗೌರವ ಅಧ್ಯಕ್ಷ ಶಿವರಾಜ ಕಲ್ಲೂರೆ, ಔರಾದ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಅರುಣಕುಮಾರ ಗುದಗೆ, ಬೀದರ್ ತಾಲ್ಲೂಕು ಅಧ್ಯಕ್ಷ ವೀರಪ್ಪ ಅಡ್ಡೆ, ಪ್ರಮುಖರಾದ ರಾಜಕುಮಾರ ಮಡಕಿ, ಸಂದೀಪ ಉದಗೀರೆ, ಸದಾನಂದ ಹಳ್ಳೆ, ಮಲ್ಲಿಕಾರ್ಜುನ್ ಚಿಕಪೇಟ್‌ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು