News Karnataka Kannada
Wednesday, April 17 2024
Cricket
ಬೀದರ್

ಹವ್ಯಾಸಕ್ಕಾಗಿ ಆರಂಭಗೊಂಡ ಕೇಕ್‌ ತಯಾರಿಕೆ ಕೆಲಸ ಕಿರು ಉದ್ಯಮವಾಗಿ ಬದಲು

Cake-making work that started out for a hobby has been turned into a small business
Photo Credit : News Kannada

ಬೀದರ್‌: ಇಲ್ಲಿನ ವಿದ್ಯಾನಗರದ ಸಿಂದೋಲ್‌ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಹವ್ಯಾಸಕ್ಕಾಗಿ ಮನೆಯಲ್ಲಿ ಕೇಕ್‌ ತಯಾರಿಸುತ್ತಿದ್ದರು. ಅದೀಗ ಕಿರು ಉದ್ಯಮವಾಗಿ ಬದಲಾಗಿದೆ. ಮಹಿಳಾ ಸಬಲೀಕರಣಕ್ಕೂ ಸಾಕ್ಷಿಯಾಗಿದೆ.

ಸಿಂದೋಲ್‌ ಕುಟುಂಬದ ಮಗಳು ಡಾ. ಭಾರ್ಗವಿ ವೃತ್ತಿಯಿಂದ ದಂತ ವೈದ್ಯೆ. ಈ ಮನೆತನದ ಸೊಸೆ ಮೇಘಾ ವೆಂಕಟ್‌ ಅವರು ‘ಆರ್ಕಿಟೆಕ್ಚರ್‌’. ಇವರಿಬ್ಬರಿಂದ ಆರಂಭಗೊಂಡ ಕೇಕ್‌ ತಯಾರಿಕೆ ಕೆಲಸ ಈಗ ಉದ್ಯಮವಾಗಿ ಬದಲಾಗಿದೆ.

ಮೂವರು ಮಹಿಳೆಯರಿಗೆ ಕೆಲಸ ಸಿಕ್ಕಿದೆ. ಇನ್ನಷ್ಟು ಮಹಿಳೆಯರಿಗೆ ಕೆಲಸಕ್ಕೆ ಸೇರಿಸಿಕೊಳ್ಳಲು ಯೋಚಿಸುತ್ತಿದ್ದಾರೆ.

ಅಂದಹಾಗೆ, ಈ ಇಬ್ಬರು ಹೆಣ್ಣು ಮಕ್ಕಳ ಹವ್ಯಾಸ ಉದ್ಯಮವಾಗಿ ಬದಲಾದ ಸಂಗತಿ ಬಹಳ ಸ್ವಾರಸ್ಯಕರವಾಗಿದೆ. ಮೇಘಾ ಅವರು ಬೆಂಗಳೂರಿನ ಪ್ರತಿಷ್ಠಿತ ‘ಪ್ರೆಸ್ಟೀಜ್‌’ ಕಂಪನಿಯಲ್ಲಿ 6ರಿಂದ 7 ವರ್ಷ ‘ಆರ್ಕಿಟೆಕ್ಚರ್‌’ ಆಗಿ ಕೆಲಸ ನಿರ್ವಹಿಸಿದ್ದಾರೆ. ಕೋವಿಡ್‌ ಲಾಕ್‌ಡೌನ್‌ನಲ್ಲಿ ಇವರು ಬೀದರ್‌ಗೆ ಹಿಂತಿರುಗಿದ್ದರು.

ಈ ವೇಳೆ ಇವರ ನಾದಿನಿ ಡಾ. ಭಾರ್ಗವಿ ಕೂಡ ಮನೆಯಲ್ಲಿಯೇ ಇದ್ದರು. ಇಬ್ಬರು ಮನೆಯ ದೈನಂದಿನ ಕೆಲಸಗಳನ್ನು ಮುಗಿಸಿದ ನಂತರ ಯೂಟ್ಯೂಬ್‌ ಮೂಲಕ ಕೇಕ್‌ ತಯಾರಿಸುವ ಆನ್‌ಲೈನ್‌ ತರಗತಿಗಳಿಗೆ ಹಾಜರಾದರು.

ಬಳಿಕ ಅದಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಮನೆಗೆ ತರಿಸಿಕೊಂಡು ತಡರಾತ್ರಿ ವರೆಗೆ ನಿದ್ದೆಗೆಟ್ಟು ಪ್ರಯೋಗಕ್ಕೆ ಮುಂದಾದರು. ಒಂದಾದ ನಂತರ ಒಂದು ಪ್ರಯೋಗ ನಡೆಸಿದ ಅವರು, ಮನೆ ಮಂದಿಗೆ ಮತ್ತು ಸಂಬಂಧಿಕರಿಗೆ ಬಗೆ ಬಗೆಯ ಕೇಕ್‌ಗಳನ್ನು ಕಳುಹಿಸಿಕೊಡಲು ಆರಂಭಿಸಿದರು. ನಂತರ ಇದು ಸ್ನೇಹಿತರವರೆಗೆ ವಿಸ್ತರಿಸಿತು.

ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದರು. ಅನಂತರ ಇವರ ಕೇಕ್‌ಗಳಿಗೆ ಬೇಡಿಕೆ ಬರಲು ಶುರುವಾಯಿತು. ಆರಂಭದಲ್ಲಿ ಸೀಮಿತ ಜನರಿಗಷ್ಟೇ ಕೇಕ್‌ಗಳನ್ನು ಮಾಡಿಕೊಡುತ್ತಿದ್ದರು. ನಂತರ ಹೆಚ್ಚಿನ ಬೇಡಿಕೆ ಬರಲಾರಂಭಿಸಿತು. ನಂತರ ಸಾಮಾಜಿಕ ಜಾಲತಾಣಗಳ ಮೂಲಕ, ಮತ್ತೆ ಕೆಲವರು ಕರೆ ಮಾಡಿ ಬೇಡಿಕೆ ಸಲ್ಲಿಸಲು ಶುರು ಮಾಡಿದರು.

ದಿನ ಕಳೆದಂತೆ ಹಿಗ್ಗುತ್ತ ಹೋಯಿತು. ಜೊಮ್ಯಾಟೊ, ಸ್ವಿಗ್ಗಿ ಮೂಲಕವೂ ಕೇಕ್‌ಗಳಿಗೆ ಬೇಡಿಕೆ ಬರಲಾರಂಭಿಸಿದೆ. ನಗರದಲ್ಲಿ ಸಾಕಷ್ಟು ಬೇಕರಿಗಳಿವೆ. ಹೀಗಿದ್ದರೂ ಇವರು ತಯಾರಿಸಿದ ಕೇಕ್‌ಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣವೇನು? ಈ ಪ್ರಶ್ನೆ ಎಂತಹವರಿಗೂ ಮೂಡುತ್ತದೆ. ಬೇಡಿಕೆ ಸಲ್ಲಿಸಿದರಷ್ಟೇ ಇವರು ಕೇಕ್‌ಗಳನ್ನು ತಯಾರಿಸುತ್ತಾರೆ.

ಯಾರಿಗೆ ಎಂತಹ ವಿನ್ಯಾಸ, ಎಷ್ಟು ಕೆ.ಜಿ. ಬೇಕೋ ಅಷ್ಟರಲ್ಲಿಯೇ ಮಾಡಿಕೊಡುತ್ತಾರೆ. ಬೆಳಿಗ್ಗೆ ಬೇಡಿಕೆ ಸಲ್ಲಿಸಿದರೆ ಸಂಜೆಯೊಳಗೆ ಸಿದ್ಧಪಡಿಸಿ ಕೊಡುತ್ತಾರೆ. ರಾಸಾಯನಿಕಗಳಿಲ್ಲದೆ ಕೇಕ್ ತಯಾರಿಸುವುದು ಇವರ ಮತ್ತೊಂದು ವೈಶಿಷ್ಟ್ಯ. ಶುಚಿ, ರುಚಿಗೂ ಹೆಚ್ಚಿನ ಆದ್ಯತೆ ನೀಡುತ್ತಾರೆ. ಬೇಕರಿಗಳಲ್ಲಾದರೆ ಅತಿಯಾದ ರಾಸಾಯನಿಕ ಉಪಯೋಗಿಸುತ್ತಾರೆ. ವಿವಿಧ ಬಗೆಯ ವಿನ್ಯಾಸಕ್ಕೆ ಕನಿಷ್ಠ 3 ಕೆ.ಜಿ ಕೇಕ್‌ ಖರೀದಿಸಬೇಕೆಂದು ಷರತ್ತು ವಿಧಿಸುತ್ತಾರೆ.

ಇವರು ಯಾವುದೇ ರೀತಿಯ ಷರತ್ತು ಹಾಕುವುದಿಲ್ಲ. ಇದೆಲ್ಲ ಕಾರಣಗಳಿಗಾಗಿ ಭಾರ್ಗವಿ ಹಾಗೂ ಮೇಘಾ ಅವರು ತಯಾರಿಸಿದ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಸಾಧಾರಣ ದಿನಗಳಲ್ಲಿ ನಿತ್ಯ ಕನಿಷ್ಠ ಏಳರಿಂದ ಎಂಟು ಕೇಕ್‌ಗಳಿಗೆ ಬೇಡಿಕೆ ಬರುತ್ತವೆ. ಏಪ್ರಿಲ್‌, ಮೇ ಹಾಗೂ ನವೆಂಬರ್‌ನಿಂದ ಫೆಬ್ರುವರಿ ಸಂದರ್ಭದಲ್ಲಿ ಮದುವೆ, ವಿವಾಹ ವಾರ್ಷಿಕೋತ್ಸವ ಹೊಸ ವರ್ಷಾಚರಣೆ ಸೇರಿದಂತೆ ಇತರೆ ಕಾರ್ಯಕ್ರಮಗಳು ಹೆಚ್ಚಾಗಿ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗುತ್ತದೆ. ಎಲ್ಲ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಬರುತ್ತಿರುವುದರಿಂದ ಮೂವರು ಮಹಿಳೆಯರಿಗೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆರ್ಥಿಕವಾಗಿ ದುರ್ಬಲವಾದ, ಕೆಲಸದ ಅಗತ್ಯ ಇರುವವರನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಇಷ್ಟರಲ್ಲೇ ಇನ್ನೂ ಇಬ್ಬರಿಂದ ಮೂವರು ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಯೋಜಿಸುತ್ತಿದ್ದಾರೆ.

ಡಾ. ಭಾರ್ಗವಿ ಅವರು ಇತ್ತೀಚೆಗೆ ಮದುವೆಯಾಗಿ ಬೆಂಗಳೂರಿಗೆ ತೆರಳಿದ್ದಾರೆ. ಮೇಘಾ ಅವರು ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇವರಿಗೆ ಇವರ ಪತಿ ವೆಂಕಟ್‌ ಸೇರಿದಂತೆ ಮನೆ ಮಂದಿಯ ಬೆಂಬಲವೂ ಇದೆ. ತಮ್ಮ ಮನೆಯ ಮೊದಲ ಮಹಡಿಯನ್ನೇ ಬೇಕರಿಯಾಗಿ ಬದಲಿಸಿಕೊಂಡಿದ್ದಾರೆ. ಮನೆಯ ಹಳೆಯ ಅಲ್ಮೆರಾ, ರೆಫ್ರಿಜಿರೇಟರ್‌, ಪ್ಲಾಸ್ಟಿಕ್‌ ವಸ್ತುಗಳೇ ಇವರ ಕಿಚನ್‌ನಲ್ಲಿವೆ. ಅತಿ ಕಡಿಮೆ ಬಂಡವಾಳದಲ್ಲಿ ಉದ್ಯಮ ಆರಂಭಿಸಿರುವುದು ಇವರ ಇನ್ನೊಂದು ವಿಶೇಷ.

‘ಸ್ವೀಟ್‌ ಟೂತ್‌ ಬೇಕರಿ’ಯಲ್ಲಿ ಕೇಕ್‌ಗಳಿಗೆ ಬೇಡಿಕೆ ಸಲ್ಲಿಸ ಬಯಸುವವರು ಮೊಬೈಲ್‌ ಸಂಖ್ಯೆ: 9449006941 ಅಥವಾ ಇನ್‌ಸ್ಟಾಗ್ರಾಂ ಖಾತೆಗೆ ಭೇಟಿ ಕೊಡಬಹುದು.

‘ನಮ್ಮ ಹವ್ಯಾಸ ಒಂದು ಉದ್ಯಮದ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಮೂವರು ಬಡ ಹೆಣ್ಣು ಮಕ್ಕಳಿಗೆ ಕೆಲಸ ಸಿಕ್ಕಿದೆ. ಇನ್ನೂ ಕೆಲವರನ್ನು ಇಷ್ಟರಲ್ಲೇ ನೇಮಕ ಮಾಡಿಕೊಳ್ಳುತ್ತೇವೆ. ಕೆಲಸದ ಅಗತ್ಯ ಇರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ’ ಎಂದು ‘ಸ್ವೀಟ್‌ ಟೂತ್‌ ಬೇಕರಿ’ ಒಡತಿ ಮೇಘಾ ಹೇಳಿದರು.

‘ನಮ್ಮ ಕೇಕ್‌ಗಳಿಗೂ ಮಾರುಕಟ್ಟೆಯಲ್ಲಿ ಸಿಗುವ ಕೇಕ್‌ಗಳ ನಡುವೆ ₹50ರಿಂದ ₹100 ಸಣ್ಣ ಪ್ರಮಾಣದ ವ್ಯತ್ಯಾಸವಿದೆ. ಶುಚಿ ರುಚಿಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ. ಬೇಡಿಕೆ ಸಲ್ಲಿಸಿದ ದಿನವೇ ಕೇಕ್‌ ತಯಾರಿಸಿ ಕೊಡುತ್ತೇವೆ. ಯಾವುದೇ ರೀತಿಯ ಸಿದ್ಧ ರಾಸಾಯನಿಕಗಳನ್ನು ಬಳಸುವುದಿಲ್ಲ. ಯಾರಿಗೆ ಎಷ್ಟು ಬೇಕೋ ಅಷ್ಟು ಹಣದಲ್ಲಿಯೇ ಅವರಿಗೆ ಬೇಕೆನಿಸಿದ ವಿನ್ಯಾಸದಲ್ಲಿ ಕೇಕ್‌ ಮಾಡಿಕೊಡಲಾಗುತ್ತದೆ. ಎಲ್ಲರೂ ಹಣವಂತರಿರುವುದಿಲ್ಲ. ಹೀಗಾಗಿ ಯಾರಿಗೂ ಷರತ್ತು ಹಾಕುವುದಿಲ್ಲ. ಇದಕ್ಕಾಗಿಯೇ ಜನ ಹೆಚ್ಚು ಇಷ್ಟಪಡುತ್ತಿದ್ದಾರೆ’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು