ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬೆಂಬಲ ನೀಡುವಂತೆ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ. ಆದರೆ, ತಮ್ಮ ಪಕ್ಷ ಮೈತ್ರಿ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸೋಮವಾರ ರಾತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೂ ಮೊದಲು ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಜೆಪಿಯವರು ಈಗ ಸಹಕಾರ ಕೇಳುತ್ತಾರೆ. ನಂತರ ನಮ್ಮ ವಿರುದ್ಧವೇ ಮಾತನಾಡುತ್ತಾರೆ. ಅವಶ್ಯಕತೆ ಇದ್ದಾಗ ನಮ್ಮನ್ನು ಬಳಸಿಕೊಂಡು ನಂತರ ದೂರು ವುದು ಬಿಜೆಪಿಯವರ ಲಕ್ಷಣ. ಈ ಕಾರಣ ದಿಂದಾಗಿ ಮೈತ್ರಿ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ’ ಎಂದರು.
ಜಾತ್ಯತೀತ ಪಕ್ಷಗಳು ಒಂದಾಗಬೇಕು ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಪಕ್ಷದ ಶಾಸಕರ ಜತೆ ಚರ್ಚಿಸಿದ ಬಳಿಕ ತೀರ್ಮಾನಕ್ಕೆ ಬರಲಾಗುವುದು ಎಂದರು.
ಮಹಾನಗರ ಪಾಲಿಕೆಯ ನಾಲ್ವರು ಜೆಡಿಎಸ್ ಸದಸ್ಯರೂ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದರು. ಪಕ್ಷದ ಬಹುತೇಕ ಶಾಸಕರು ಸಭೆಯಲ್ಲಿದ್ದರು.