Ad

ಸಚಿವರ ಮನೆ ಮುಂದೆ ಮುಂದುವರೆದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಡೆಸುವ ಮೂಲಕ ಸರ್ಕಾರ ಅಂಗನವಾಡಿಗಳನ್ನು ಮುಚ್ಚುವ ಹುನ್ನಾರ ನಡೆಸಿದೆ.

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಡೆಸುವ ಮೂಲಕ ಸರ್ಕಾರ ಅಂಗನವಾಡಿಗಳನ್ನು ಮುಚ್ಚುವ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು ಜನಪ್ರತಿನಿಧಿಗಳ ಮನೆ ಮುಂದೆ ನಡೆಸುತ್ತಿರುವ ಅನಿರ್ದಿಷ್ಟ ಅವಧಿಯ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

Ad
300x250 2

ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರ ಮನೆ ಎದುರು ಪ್ರತಿಭಟನೆ ನಡೆಸಿದರು.

ಕೆಕೆಆರ್‌ಡಿಬಿ ಅಡಿಯಲ್ಲಿ ಎಲ್‌ಕೆಜಿ, ಯುಕೆಜಿಯನ್ನು ಪ್ರಾರಂಭಿಸುವ ಆದೇಶ ಹಿಂಪಡೆದು, 1008 ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಅಲ್ಲಿಯೇ ಈ ತರಗತಿಗಳನ್ನು ಪ್ರಾರಂಭ ಮಾಡುವಂತೆ ಒತ್ತಾಯಿಸಿದರು.

ಎಲ್‌ಕೆಜಿ, ಯುಕೆಜಿ ಪ್ರಾರಂಭ ಆದೇಶ ನಿಲ್ಲಿಸಬೇಕು. ಈಗಾಗಲೇ ಶಿಕ್ಷಣ ಇಲಾಖೆಯಡಿಯಲ್ಲಿರುವ ಎಲ್‌ಕೆಜಿ, ಯುಕೆಜಿ ಮತ್ತು ಕೆಪಿಎಸ್‌ ಶಾಲೆಗಳಲ್ಲಿ ಮಕ್ಕಳ ಒಟ್ಟು ಸ್ಥಿತಿಯ ಬಗ್ಗೆ ಅಧ್ಯಯನ ಮಾಡಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿರುವ ಮಕ್ಕಳ ಸ್ಥಿತಿ-ಗತಿ ಬಗ್ಗೆ ಅಧ್ಯಯನ ಮಾಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಸಂಘದ ಕಾರ್ಯಾಧ್ಯಕ್ಷೆ ಶಾಂತಾ ಎಸ್‌.ಘಂಟೆ, ಜಿಲ್ಲಾ ಅಧ್ಯಕ್ಷೆ ಗೌರಮ್ಮ ಪಿ. ಪಾಟೀಲ, ಖಜಾಂಚಿ ಮಹಾದೇವಿ ಕುಡಳ್ಳಿಕರ, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಪ್ರಮುಖರಾದ ದೇವಮ್ಮ ಅನ್ನದಾನಿ, ರಾಧಾ ಲಕ್ಕನೂರ, ಸಾಬಮ್ಮ ಎಂ. ಹಾಜರಿದ್ದರು.

Ad
Ad
Nk Channel Final 21 09 2023
Ad