ಬೆಂಗಳೂರು: ಇನ್ಮುಂದೆ ಶನಿವಾರ, ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಆಗಲಿದ್ದು, ಅಕ್ಟೋಬರ್ 21ರಿಂದ ಜಾರಿಗೆ ಬರಲಿದೆ.
ರಾಜ್ಯದಲ್ಲಿ ಅಕ್ಟೋಬರ್ 21ರಿಂದ ಶನಿವಾರ ಮತ್ತು ಭಾನುವಾರವೂ ಸ್ವತ್ತುಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ಬೆಂಗಳೂರಿನ ಐದು ಉಪನೋಂದಣಿ ಕಚೇರಿಗಳು ಸೇರಿ ರಾಜ್ಯದ 35 ಉಪನೋಂದಣಿ ಕಚೇರಿಗಳಲ್ಲಿ ಈ ಸೌಲಭ್ಯ ಸಿಗಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಜನರಿಗೆ ಸುಗಮ ಆಡಳಿತ ನೀಡುವ ಭಾಗವಾಗಿ ಈ ಸೇವೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ದುಡಿಯುವ ಮಧ್ಯಮ ವರ್ಗದ ಜನರು ವಾರದ ದಿನಗಳಲ್ಲಿ ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಈ ಸಮಯದಲ್ಲಿ ಅವರು ಕೆಲಸ ಬಿಟ್ಟು, ನೋಂದಣಿ ಕಚೇರಿಗಳಿಗೆ ಬರವುದು ಕಷ್ಟ. ಇನ್ನು ನೋಂದಣಿಗಾಗಿ ಹೊರ ರಾಜ್ಯಗಳಿಂದ ಬರುವವರಿಗೂ ತೊಂದರೆಗಳಾಗುತ್ತಿವೆ. ಹೀಗಾಗಿ ವಾರಾಂತ್ಯದಲ್ಲಿ ಜನರಿಗೆ ಬಿಡುವು ಸಿಗುವುದರಿಂದ ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ವಾರದಲ್ಲಿ ಶನಿವಾರ, ಭಾನುವಾರವೂ ನೋಂದಣಿ ಕಚೇರಿಗಳನ್ನು ತೆರೆಯಲು ನಿರ್ಧರಿಸಿದ್ದೇವೆ ಎಂದಿದ್ದಾರೆ.