ಮೈಸೂರು: ಮುಡಾ ಹಗರಣದ ತನಿಖೆ ಸಂಕಷ್ಟ ಮಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ ಗಣತಿ ವರದಿ ಜಾರಿ ಮಾಡೇ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ಮೈಸೂರಿನಲ್ಲಿಂದು ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜಾತಿಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನೂ ಅದನ್ನು ಪರಿಪೂರ್ಣವಾಗಿ ನೋಡಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಕ್ಯಾಬಿನೆಟ್ ಗೆ ಇಟ್ಟು ಜಾರಿಗೆ ತರುತ್ತೇನೆ. ಜಾತಿ ಗಣತಿ ಜಾರಿ ನಮ್ಮ ಪಕ್ಷದ ಅಜೆಂಡಾ. ಹೀಗಾಗಿ ಜಾರಿ ಮಾಡೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಜಾತಿ ಗಣತಿ ವರದಿ ಎಂದೇ ಜನಪ್ರಿಯವಾಗಿರುವ ಸಾಮಾಜಿಕ ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ಬಹು ನಿರೀಕ್ಷಿತ ವರದಿಯನ್ನು ಈಗಾಗಲೇ ಕೆಎಸ್‌ಸಿಬಿಸಿ ಅಧ್ಯಕ್ಷರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ. ವರದಿಯು ಈ ಎರಡೂ ದೊಡ್ಡ ಸಮುದಾಯಗಳ ನಡುವೆ ಕೋಲಾಹಲವನ್ನು ಸೃಷ್ಟಿಸಿದೆ.
ಈ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗಿವೆ. ಕೆಲವರು ಜಾರಿ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದರೆ, ಇನ್ನೂ ಕೆಲವರು ಇದನ್ನು ತಿರಸ್ಕೃತ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇವೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯನವರು ವರದಿಯನ್ನು ಜಾರಿ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.