ಬೆಂಗಳೂರು: ದಸರಾ ಹಬ್ಬಕ್ಕೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿದ್ದು, ಇಡೀ ಕರ್ನಾಟಕದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ.
ಈ ಹಿಂದೆ ಕರಾವಳಿ ಭಾಗದಲ್ಲಿ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಆಗುತ್ತಿತ್ತು. ಆದರೆ, ಈ ಬಾರಿ ಯಾವುದೇ ಮಾರ್ಪಾಡು ಆಗಿಲ್ಲ. ಇಡೀ ಕರ್ನಾಟಕದ ಎಲ್ಲಾ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಲಾಗಿದೆ. ಅಕ್ಟೋಬರ್ 3 ರಿಂದ 20ರ ತನಕ ಅಂದರೆ 17 ದಿನಗಳ ಕಾಲ ದಸರಾ ರಜೆ ಸಿಗಲಿದೆ.
ಅಕ್ಟೋಬರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ನಡೆಯಲಿದೆ. 2024-2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾರದಂತೆ ರಜೆಗಳು ಘೋಷಣೆಯಾಗಿವೆ.
ಸೆಪ್ಟೆಂಬರ್ 23ರಿಂದ ಮಧ್ಯಂತರ ಪರೀಕ್ಷೆಗಳು ಶುರುವಾಗಿ ಸೆಪ್ಟೆಂಬರ್ 30ರ ತನಕ ನಡೆಯಲಿದೆ. ಆ ಬಳಿಕ ಶಾಲಾ ಮಕ್ಕಳಿಗೆ ದಸರಾ ರಜೆ ಪ್ರಕ್ರಿಯೆ ಆರಂಭವಾಗಲಿದೆ. ಅಕ್ಟೋಬರ್ 2ರಂದು ಎಲ್ಲಾ ಶಾಲೆಗಳಲ್ಲೂ ಗಾಂಧಿ ಜಯಂತಿ ಆಚರಣೆ ನಡೆಯಲಿದೆ.