ಹುಬ್ಬಳ್ಳಿ : ವಕ್ಫ್ ಆಸ್ತಿ ವಿವಾದದ ವಿರುದ್ಧ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಒಟ್ಟಾಗಿ ಹೋರಾಟ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ವಪಕ್ಷದ ನಾಯಕರಿಗೆ ಸಲಹೆ ನೀಡಿದರು.
ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ವಿಚಾರವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ & ಟೀಂ ವಕ್ಫ್ ವಿವಾದದ ವಿರುದ್ಧ ಪ್ರತ್ಯೇಕ ಹೋರಾಟಕ್ಕೆ ನಿರ್ಧಾರಿಸಿದೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ಹಿಂದೂ ಸಮಾಜಕ್ಕೆ ಬಂದಿರುವ ದೊಡ್ಡ ಕಂಟಕ. ನಿಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇರಲಿ. ಒಟ್ಟಿಗೆ ಕುಳಿತು ಚರ್ಚಿಸಿ, ಒಟ್ಟಾಗಿ ಹೋರಾಟ ಮಾಡಿ. ವಕ್ಫ್ ವಿರುದ್ಧದ ಹೋರಾಟಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜೋಶಿ ಅವರು ಕಿವಿಮಾತು ಹೇಳಿದರು.
ಈಗಾಗಲೇ ಯತ್ನಾಲ್ & ಟೀಂ ಹೋರಾಟದ ಬಗ್ಗೆ ರೂಪರೇಷೆ ರೂಪಿಸಲು ಪ್ರತ್ಯೇಕ ಸಭೆಯೂ ಮಾಡಿ ಹೋರಾಟಕ್ಕೆ ನಿರ್ಧರಿಸಿರುವುದರ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರೂ ಟೀಕಿಸಿದ್ದರು. ಭಿನ್ನಮತೀಯರಿಗೆ ಹೈಕಮಾಂಡ್ ನಾಯಕರು ಬುದ್ಧಿ ಹೇಳಿ ಎಂದೂ ಆಗ್ರಹಿಸಿದ್ದರು.