ಹುಬ್ಬಳ್ಳಿ: ನಗರದಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮ್ಮ ಕೆಲವು ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಪಿಗಳು, 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಹೆಸರಾಂತ ಅಂಗಡಿ ವ್ಯಾಪಾರಿಯೊಬ್ಬರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಹನಿಟ್ರ್ಯಾಪ್ ಮಾಡಿದ್ದ ಐವರನ್ನು ಬಂಧಿಸಿದ್ದಾರೆ. ಜೋಯಾ ಶಬಾನಾ, ಪರವಿನ್ ಭಾನು, ಸಯೀದ್, ತೌಸಿಪ್ ಮತ್ತು ಅಬ್ದುಲ್ ರೆಹಮಾನ್ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳಾದ ಸಯೀದ್, ತೌಸಿಪ್, ಅಬ್ದುಲ್ ರೆಹಮಾನ್ ಅಂಗಡಿಯ ಹೊರಗೆ ಹಾಕಿರುವ ನಂಬರ್ಗಳನ್ನು ಕಲೆಕ್ಟ್ ಮಾಡಿ ಜೋಯಾ ಹಾಗೂ ಪರವಿನ್ಗೆ ನೀಡುತ್ತಿದ್ದರು. ಇವರಿಬ್ಬರೂ ನಂಬರ್ಗಳಿಗೆ ಮೆಸೇಜ್, ಕಾಲ್ ಮಾಡಿ ಸಲುಗೆಯಿಂದ ಬಲೆಗೆ ಹಾಕಿಕೊಂಡು, ಅವರ ಜೊತೆಗಿರುವ ವಿಡಿಯೋಗಳನ್ನು ಮಾಡಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದರು. ವಿವಿಧ ಕಂಪನಿಯ 5 ಮೊಬೈಲ್, ಎರಡು ಬೈಕ್ ಹಾಗೂ 9 ಸಾವಿರ ನಗದು ಹಣ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.