ಚಿಕ್ಕಬಳ್ಳಾಪುರ: ಹದಿಹರೆಯದ ವಯಸ್ಸಲ್ಲೇ ಪ್ರೀತಿ-ಪ್ರೇಮ-ಪ್ರಣಯ ಅಂತಾ ಸುತ್ತಾಡಿದ ಜೋಡಿ ಕೊನೆಗೆ ಒಂದೇ ಹಗ್ಗದಲ್ಲಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕದಾಸೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೂಲತಃ ಚಿಂತಾಮಣಿ ತಾಲೂಕಿನ ಸೀತಾರಾಮಪುರ ಗ್ರಾಮದ ವಂದನಾ ಹಾಗೂ ನವೀನ್ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರಿಬ್ಬರು ಒಂದೇ ಗ್ರಾಮದವರಾಗಿದ್ದು, ಹದಿಹರೆಯದ ವಯಸ್ಸಲ್ಲಿ ಪರಸ್ಪರ ಪ್ರೀತಿಸಿ (Love) ಮನೆ ಬಿಟ್ಟು ಹೋಗಿದ್ದರು. ಈ ಸಂಬಂಧ 4 ತಿಂಗಳ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಬಿಡಲಾಗಿತ್ತು. ಇನ್ನು ಯುವಕನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಸಾಂತ್ವನ ಕೇಂದ್ರದಲ್ಲಿದ್ದ ಬಾಲಕಿ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಎರಡು ದಿನಗಳ ಹಿಂದೆ ಜೈಲಿನಿಂದ ಜಾಮೀನಿನ ಮೇರೆಗೆ ಬಿಡುಗಡೆಯಾಗಿ ಬಂದಿದ್ದ ಯುವಕ ಶಾಲೆಯ ಬಳಿ ಬಂದು ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.