ಚಾಮರಾಜನಗರ : ನಡು ರಾತ್ರಿ ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಾನೆ ಸಂಚಾರ ನಡೆಸಿದ ಘಟನೆ ನಡೆದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನು ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ. ಇದುವರೆಗೆ ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸಂಚರಿಸುತ್ತಿದ್ದ ಕಾಡಾನೆಗಳು ನಗರದಲ್ಲಿ ಅಡ್ಡಾಡುವುದು ಆತಂಕಕ್ಕೆ ಕಾರಣವಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಡಾ. ರಾಜ್ ಕುಮಾರ್ ರಸ್ತೆ ವೃತ್ತದಲ್ಲಿ ಎರಡು ಕಾಡಾನೆಗಳು ರಾಜ ಗಾಂಭೀರ್ಯವಾಗಿ ಸಂಚಾರ ಮಾಡುತ್ತಿರುವ ದೃಶ್ಯ ಪೆಟ್ರೋಲ್ ಬಂಕ್ ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ನಡೆದ ಬಂದ ಕಾಡಾನೆಗಳು ಪೆಟ್ರೋಲ್ ಬಂಕ್ ಒಳಗೆ ಬಂದು ಸುತ್ತಾಡಿ ಮತ್ತೆ ರಸ್ತೆಗೆ ತೆರಳಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶುಕ್ರವಾರ ಮುಂಜಾನೆ ಸುಮಾರು ಒಂದೂವರೆ ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಆನೆ ಬರುವುದನ್ನು ಕಂಡ ಪೆಟ್ರೋಲ್ ಬಂಕ್ ನ ಸಿಬ್ಬಂದಿಯೊಬ್ಬರು ಹೆದರಿ ಅಲ್ಲಿಂದ ಕಾಲ್ಕಿತ್ತರು ಬಳಿಕ ಕಾಡಾನೆ ಬಂದು ಹೋಗಿದೆ. ಇದೀಗ ಕಾಡಾನೆ ಸೆರೆಗೆ ಅರಣ್ಯ ಇಲಾಖೆಯವರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಪಟ್ಟಣದೊಳಗೆ ಬಂದಿರುವ ಕಾಡಾನೆ ಎಲ್ಲಿಗೆ ಹೋಗಿವೆ? ಎಂಬ ಪ್ರಶ್ನೆ ಉದ್ಭವಿಸಿದೆ ಹಾಗೆಯೇ ಸುತ್ತಮುತ್ತಲ ವ್ಯಾಪ್ತಿಯ ಜನರು ಭಯಭೀತರಾಗಿದ್ದಾರೆ.