Bengaluru 23°C

ಚಾಮರಾಜನಗರದಲ್ಲಿ ಆನೆ ದಂತ ಸಹಿತ ಇಬ್ಬರ ಬಂಧನ

ಕಾಡಾನೆಯ ದಂತವನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ದಂತವನ್ನು ವಶಪಡಿಸಿಕೊಂಡಿರುವ ಘಟನೆ ಹನೂರು ತಾಲ್ಲೂಕಿನ ಮಹದೇಶ್ವರಬೆಟ್ಟ- ಕೌದಳ್ಳಿ ಮಾರ್ಗ ಮಧ್ಯೆ ನಡೆದಿದೆ.

ಚಾಮರಾಜನಗರ: ಕಾಡಾನೆಯ ದಂತವನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ದಂತವನ್ನು ವಶಪಡಿಸಿಕೊಂಡಿರುವ ಘಟನೆ ಹನೂರು ತಾಲ್ಲೂಕಿನ ಮಹದೇಶ್ವರಬೆಟ್ಟ- ಕೌದಳ್ಳಿ ಮಾರ್ಗ ಮಧ್ಯೆ ನಡೆದಿದೆ.


ತಮಿಳುನಾಡಿನ ಪೆರುಮಾಳ ಎಂಬುವರ ಪುತ್ರ ಶಕ್ತಿವೇಲು(45) ಹಾಗೂ ಹನೂರಿನ ಶಂಕರ ನಾರಯಣ್ ರವರ ಪುತ್ರ ನಾಗೇಂದ್ರಬಾಬು (63) ಎಂಬುವರೇ ಆನೆ ದಂತ ಮಾರಾಟಕ್ಕೆ ಯತ್ನಿಸಿ ರಾಮಾಪುರ ಪೊಲೀಸರ ಕೈಗೆ ಸಿಕ್ಕಿ ಬಿದ್ದವರು.


ಆರೋಪಿಗಳಾದ ಶಕ್ತಿವೇಲು ಮತ್ತು ನಾಗೇಂದ್ರಬಾಬು ಆನೆ ದಂತವನ್ನು ಮಾರಾಟ ಮಾಡುವ ಸಲುವಾಗಿ ತಮ್ಮ ಬೈಕ್ ನಲ್ಲಿ ಸಾಗಾಟ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್ ಐ ಲೋಕೇಶ್, ಮುಖ್ಯಪೇದೆ ಗಿರೀಶ್, ಪೇದೆಗಳಾದ ಮಹೇಂದ್ರ ಲಿಯಾಖತ್ ಖಾನ್,


ಪರಶುರಾಮ್, ಮಕಂದರ್ ಅವರನ್ನೊಳಗೊಂಡ ತಂಡ ಕೌದಳ್ಳಿ ಮಹದೇಶ್ವರಬೆಟ್ಟ ಮುಖ್ಯರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಬೈಕನ್ನು ತಡೆದು ಚೀಲವನ್ನು ಪರಿಶೀಲನೆ ನಡೆಸಿದಾಗ ಸುಮಾರು 2ಲಕ್ಷ ಮೌಲ್ಯದ 980 ಗ್ರಾಂ ತೂಕದ ದಂತ ಪತ್ತೆಯಾಗಿದೆ.


ವಿಚಾರಣೆ ನಡೆಸಿದಾಗ ಆರೋಪಿಗಳಿಗೆ ಆನೆದಂತವು ಪಾಲಾರ್ ಅರಣ್ಯ ಪ್ರದೇಶದಲ್ಲಿ ಸಿಕ್ಕಿರುವುದಾಗಿ ತಿಳಿಸಿದ್ದಾರೆ ಅಲ್ಲದೆ ಇದನ್ನು ಹನೂರು ವ್ಯಾಪ್ತಿಯಲ್ಲಿ ಮಾರಾಟ ಮಾಡಲು ತೆರಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ


Nk Channel Final 21 09 2023