ಚಾಮರಾಜನಗರ : ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರು ಜಿಲ್ಲೆಯ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮಾಡುವಾಗ ಹುಲಿಗಳ ದರ್ಶನಕ್ಕಾಗಿ ಹಾತೊರೆಯುತ್ತಾರೆ. ಕೆಲವೊಮ್ಮೆ ಹುಲಿಗಳು ಕಾಣಿಸದೆ ನಿರಾಸೆಯುಂಟು ಮಾಡುತ್ತವೆ. ಇನ್ನೊಮ್ಮೆ ಕಾಣಿಸಿಕೊಂಡು ಖುಷಿ ಕೊಡುತ್ತವೆ. ಇದೀಗ ವರ್ಷಾಂತ್ಯದಲ್ಲಿ ಸಫಾರಿಗೆ ಹೋದವರಿಗೆ ಒಂದಲ್ಲ ಐದು ಹುಲಿ ಕಾಣಿಸಿಕೊಂಡಿದ್ದು ಇದನ್ನು ನೋಡಿದವರು ಫಿದಾ ಆಗಿದ್ದಾರೆ.
ತಾಯಿ ಹುಲಿ ನೀರು ಕುಡಿಯುತ್ತಿದ್ದರೆ ಮರಿ ಹುಲಿಗಳು ಪಕ್ಕದಲ್ಲಿ ನಿಂತು ನೀರನ್ನೇ ವೀಕ್ಷಿಸುತ್ತಿವೆ. ಈ ದೃಶ್ಯವನ್ನು ಸಫಾರಿಗೆ ತೆರಳಿದವರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ತೇಲಿ ಬಿಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮೂರುಕರೆ ಬಳಿ ಏಕಕಾಲದಲ್ಲಿ ಐದು ಹುಲಿಗಳ ದರ್ಶನ ಮಾಡಿದ್ದು, ತನ್ನ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ವಿಹರಿಸುವ ಅದ್ಭುತ ದೃಶ್ಯ ಇದಾಗಿದೆ. ಸಫಾರಿಯಲ್ಲಿದ್ದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಅಪರೂಪಕ್ಕೆ ಕಾಣಿಸಿದ ಈ ದೃಶ್ಯ ಪ್ರಾಣಿಪ್ರಿಯರ ಮನಸೆಳೆದಿದೆ.
ಸಫಾರಿಗೆ ತೆರಳಿದವರಿಗೆ ಅರಣ್ಯದಲ್ಲಿ ಕೆಲವೊಮ್ಮೆ ಹುಲಿಗಳು ಕಾಣ ಸಿಗುತ್ತವೆಯಾದರೂ ನಾಲ್ಕು ಮರಿಯೊಂದಿಗೆ ತಾಯಿ ಹುಲಿ ಕಾಣಿಸುವುದುನ ಅಪರೂಪವೇ.. ಕೆಲವೊಂದು ಸಲ ಅಲ್ಲೊಂದು ಇಲ್ಲೊಂದು ಹುಲಿ ನೋಡಲು ಸಿಗುತ್ತದೆ. ಉಳಿದಂತೆ ಹೆಚ್ಚಾಗಿ ಜಿಂಕೆಗಳೇ ಕಾಣಿಸುತ್ತವೆ. ಆದರೀಗ ಬಿಸಿಲ ತಾಪಕ್ಕೆ ದಾಹ ತೀರಿಸಿಕೊಳ್ಳಲು ನೀರು ಕುಡಿಯಲು ಬಂದ ವೇಳೆ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ.