ಚಾಮರಾಜನಗರ: ಮನುಷ್ಯರೇ ಆಗಲೀ ಪ್ರಾಣಿಗಳೇ ಆಗಲಿ, ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳ ರಕ್ಷಣೆಗಾಗಿ ಎಂತಹದ್ದೇ ಹೋರಾಟಕ್ಕೂ ಸಿದ್ದರಿರುತ್ತಾಳೆ ಎಂಬುದಕ್ಕೆ ತಾಯಿ ಆನೆಯೊಂದು ಹುಲಿಯನ್ನು ಅಟ್ಟಾಡಿಸಿದ ಘಟನೆ ಸಾಕ್ಷಿಯಾಗಿದೆ. ಇದು ಚಾಮರಾಜನಗರ ಜಿಲ್ಲೆಯ ಬಂಡಿಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಸದ್ಯ ಮರಿಯಾನೆಯನ್ನು ಬೇಟೆಯಾಡಲು ಹೊಂಚು ಹಾಕಿ ಕುಳಿತಿದ್ದ ಹುಲಿಯನ್ನು ತಾಯಿ ಆನೆ ಹಿಮ್ಮೆಟ್ಟಿಸಿರುವ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದ ಸಫಾರಿ ವಲಯದಲ್ಲಿ ತಾಯಿ ಆನೆಯ ಜೊತೆ ಮರಿಯಾನೆ ಮೇಯುತ್ತಿರುವಾಗ ಸಮೀಪದಲ್ಲಿ ಹುಲಿಯೊಂದು ಬೇಟೆಗೆ ಹೊಂಚು ಹಾಕಿ ಕುಳಿತಿರುತ್ತದೆ. ಹುಲಿ ದಾಳಿ ಮಾಡುವ ಮುನ್ಸೂಚನೆ ಅರಿತ ತಾಯಿ ಆನೆ ಪ್ರತಿದಾಳಿಗೆ ಮುಂದಾಗಿದ್ದು ಹುಲಿಯು ಸ್ಥಳದಿಂದ ಹೊರಟು ಹೋಗುತ್ತದೆ.
ಈ ಅದ್ಭುತ ದೃಶ್ಯಗಳನ್ನು ಸಫಾರಿಗೆ ತೆರಳಿದ ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಮರಿಯ ಮೇಲಿನ ತಾಯಿಯ ಪ್ರೀತಿ, ವಾತ್ಸಲ್ಯ ಕಂಡು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕುರಿತಂತೆ ಕಾಮೆಂಟ್ ಗಳು ಹೊರಬರುತ್ತಿವೆ.
ಇತ್ತೀಚೆಗಿನ ದಿನಗಳಲ್ಲಿ ಬಂಡೀಪುರ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹತ್ತು ಹಲವು ಸುಂದರ ದೃಶ್ಯಗಳು ನೋಡಲು ಸಿಗುತ್ತಿದ್ದು ಅವುಗಳನ್ನು ಕ್ಯಾಮರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿರುವುದರಿಂದ ಎಲ್ಲರಿಗೂ ನೋಡುವ ಅವಕಾಶ ಸಿಗುತ್ತಿದೆ.