ಚಾಮರಾಜನಗರ: ವರ್ಷದ ಮೊದಲ ಕಾಣಿಕೆ ಸಂಗ್ರಹದ ಎಣಿಕೆಯನ್ನು ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಡಲಾಗಿದ್ದು ಈ ಬಾರಿ 30 ದಿನಗಳ ಅವಧಿಯಲ್ಲಿ 2.29 ಕೋಟಿ ರೂ. ಸಂಗ್ರಹವಾಗುವ ಮೂಲಕ ಮಾದಪ್ಪ ಕೋಟಿ ಒಡೆಯನಾಗಿಯೇ ಮುಂದುವರೆದಿದ್ದಾನೆ.
ಅಮಾವಾಸ್ಯೆ, ಹೊಸವರ್ಷ ಆಚರಣೆ, ಸಾಲು ಸಾಲು ಸರ್ಕಾರಿ ರಜೆಯ ಕಾರಣದಿಂದ ಅಲ್ಲದೆ, ಶಬರಿಮಲೆ, ಓಂ ಶಕ್ತಿ ಯಾತ್ರಾರ್ಥಿಗಳು ಆಗಮಿಸಿರುವುದು ಜತೆಗೆ ಶಕ್ತಿಯೋಜನೆಯಿಂದಾಗಿ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿರುವ ಕಾರಣದಿಂದಾಗಿ ಹೆಚ್ಚಿನ ಕಾಣಿಕೆ ಬಿದ್ದಿದೆ.
ಎಣಿಕೆ ಕಾರ್ಯವನ್ನು ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು, ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ನಡೆಸಲಾಗಿದ್ದು ಬೆಳಿಗ್ಗೆಯಿಂದ ರಾತ್ರಿವರೆಗೂ ಎಣಿಕೆ ಕಾರ್ಯ ನಡೆದಿದೆ.
ಎಣಿಕೆ ವೇಳೆ ಹರಕೆಯ ರೂಪದಲ್ಲಿ 2,29,67,216 ನಗದು 18 ಗ್ರಾಂ ಚಿನ್ನ ಹಾಗೂ 1,200 ಬೆಳ್ಳಿ ಪದಾರ್ಥಗಳು ದೊರೆತಿದೆ. ಇದಲ್ಲದೆ ಇ ಹುಂಡಿಯಿಂದ 4,21,505 ವಿದೇಶಿ 19 ನೋಟುಗಳು ಇದಲ್ಲದೆ ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 17 ನೋಟುಗಳು ಹುಂಡಿಯಲ್ಲಿ ದೊರೆತಿದೆ.
ಎಣಿಕೆ ಕಾರ್ಯದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾಧೀಕ್ಷಕ ಗುರು ಮಲ್ಲಯ್ಯ, ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಶಶಿಕುಮಾರ್, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.