ಚಾಮರಾಜನಗರ : ಹಾಡು ಹಗಲೇ ಭಿಕ್ಷಾಟನೆ ಮಾಡುವ ಮಹಿಳೆಯೊಬ್ಬಳು ತನ್ನೊಂದಿಗೆ ಭಿಕ್ಷೆ ಬೇಡಲು ಬಂದಿದ್ದ ಮತ್ತೊಬ್ಬ ಭಿಕ್ಷುಕಿಯ ಮಗುವನ್ನೇ ಅಪಹರಣ ಮಾಡಿದ ಘಟನೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ಚಾಮರಾಜನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಭಿಕ್ಷೆ ಬೇಡಲು ಬಂದಿದ್ದ ರಾಮನಗರದ ಪಾದರಾಯನಪುರದ ಅನಿತಾಳ 3 ವರ್ಷದ ಹೆಣ್ಣು ಮಗುವನ್ನು ಜತೆಗೆ ಬಂದಿದ್ದ ಮತ್ತೊಬ್ಬ ಮಹಿಳೆ ಹೊತ್ತೊಯ್ದಿದ್ದಾಳೆ. ಅವಳ ಹೆಸರು, ವಿಳಾಸ ಪತ್ತೆಯಾಗಿಲ್ಲ. ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅನಿತಾ ದೂರು ನೀಡಿದ್ದಾಳೆ.
ಪೊಲೀಸರು ಹೇಳುವ ಪ್ರಕಾರ, ಅನಿತಾ ತುಸು ಮಂದಬುದ್ದಿಯ ಮಹಿಳೆ ಎನ್ನಲಾಗಿದೆ. ಈಕೆ ಕಳೆದ ವಾರ ತನ್ನ ಮಗುವಿನೊಂದಿಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರಬೆಟ್ಟಕ್ಕೆ ಬಂದಿದ್ದಳು. ಇಲ್ಲಿ ಈಕೆಗೆ ಮಹಿಳೆಯೊಬ್ಬಳ ಪರಿಚಯವಾಗಿದೆ. ಅನಿತಾಳ ಮಗುವನ್ನು ಮಹಿಳೆ ಬಳಸಿಕೊಂಡು ದೇವಸ್ಥಾನದ ಸುತ್ತಮುತ್ತ ಭಿಕ್ಷಾಟನೆ ನಡೆಸಿದ್ದಾಳೆ. ಭಿಕ್ಷೆಯಲ್ಲಿ ಸಿಕ್ಕ ಹಣದಲ್ಲಿ ಅನಿತಾಳಿಗೂ ಸ್ವಲ್ಪ ಹಣ ಕೊಟ್ಟಿದ್ದಾಳೆ.
ಮಹದೇಶ್ವರಬೆಟ್ಟದಲ್ಲಿ ನಾಲೈದು ದಿನ ಇದ್ದು, ಬಳಿಕ ಅನಿತಾ ಮತ್ತು ಮಗುವನ್ನು ಮಹಿಳೆ ಕೊಳ್ಳೇಗಾಲ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಇಲ್ಲಿಯೂ ಭಿಕ್ಷೆ ಕೇಳುತ್ತಾ ಕಾಸು ಮಾಡಿದ್ದಾಳೆ. ನಂತರ ಮೈಸೂರಿಗೆ ಹೋಗಿ ಭಿಕ್ಷಾಟನೆ ನಡೆಸಿದ್ದಾಳೆ. ಇಲ್ಲಿಂದ ನಂಜನಗೂಡು ದೇವಸ್ಥಾನಕ್ಕೆ ಹೋಗಿ ಭಿಕ್ಷೆ ಬೇಡಿದ್ದಾಳೆ. ಗುರುವಾರ ಚಾಮರಾಜನಗರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಅನಿತಾಳನ್ನು ಕರೆದುಕೊಂಡು ಬಂದು ಈಕೆಯಿಂದ ಮಗುವನ್ನು ಪಡೆದು ಅಂಗಡಿಗಳ ಬಳಿ ಭಿಕ್ಷೆ ಬೇಡುತ್ತಾ ನಾಪತ್ತೆಯಾಗಿದ್ದಾಳೆ. ಈ ವಿಷಯ ಪೊಲೀಸರಿಗೆ ಗೊತ್ತಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅನಿತಾಳಿಂದ ದೂರು ಪಡೆದುಕೊಂಡು ಮಗು ಎತ್ತಿಕೊಂಡು ಹೋಗಿರುವ ಮಹಿಳೆಯ ಹುಡುಕಾಟ ಆರಂಭಿಸಿದ್ದಾರೆ.
ಅನಿತಾಳ ಮಗುವನ್ನು ಮಹಿಳೆ ಎತ್ತಿಕೊಂಡು ಭಿಕ್ಷೆ ಕೇಳುತ್ತಿರುವ ವಿಡಿಯೋವನ್ನು ಶೇರ್ ಮಾಡಿ, ‘ಈ ಮಹಿಳೆ ಚಾಮರಾಜನಗರದ ಬಸ್ ನಿಲ್ದಾಣದಲ್ಲಿ ಮಗು ಎತ್ತಿಕೊಂಡು ಹೋಗಿದ್ದಾಳೆ. ಇವಳ ಮಾಹಿತಿ ಸಿಕ್ಕರೆ ತಿಳಿಸಿ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಲಭ್ಯವಾಗಿವೆ. ಅನಿತಾಳಿಂದ ಮಗು ಪಡೆದುಕೊಂಡ ಮಹಿಳೆ ಅಂಗಡಿಯಲ್ಲಿ ಭಿಕ್ಷೆ ಕೇಳುತ್ತಾ ಮರೆಯಾಗುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಮಗು ಅಪಹರಿಸಿದ ಮಹಿಳೆ ಶ್ರೀಚಾಮರಾಜೇಶ್ವರ ದೇವಸ್ಥಾನದ ಬಳಿಗೆ ಆಗಮಿಸಿದ್ದಾಳೆ. ಬಳಿಕ ಅಲ್ಲಿ ಆಟೋ ಹತ್ತಿ ರೈಲು ನಿಲ್ದಾಣಕ್ಕೆ ಹೋಗಿದ್ದಾಳೆ. ಅಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲದ ಕಾರಣ ಎಲ್ಲಿಗೆ ಹೋಗಿದ್ದಾಳೆ ಎನ್ನುವುದು ಗೊತ್ತಾಗಿಲ್ಲ. ಪೊಲೀಸರ ತಂಡ ಮಲೆ ಮಹದೇಶ್ವರ ಬೆಟ್ಟ, ಕೊಳ್ಳೇಗಾಲ, ಮೈಸೂರು, ನಂಜನಗೂಡಿನಲ್ಲಿ ಮಹಿಳೆ ಪತ್ತೆಗೆ ತೆರಳಿದೆ.