ಚಾಮರಾಜನಗರ: ದೇವಸ್ಥಾನವಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದೆಂದು ಅರಣ್ಯ ಇಲಾಖೆ ಅಧಿಕಾರಿಗಳು ದೇವಸ್ಥಾನಕ್ಕೆ ಬೇಲಿ ಹಾಕಲು ಮುಂದಾದ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ಕಾಡಂಚಿನ ಗ್ರಾಮ ಅರೇಪಾಳ್ಯದಲ್ಲಿ ನಡೆದಿದ್ದು ಗ್ರಾಮಸ್ಥರ ಪ್ರತಿಭಟನೆಯಿಂದ ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.
ಕರ್ನಾಟಕ ತಮಿಳುನಾಡು ನಡುವಿನ ಮುಖ್ಯ ರಸ್ತೆಯಲ್ಲಿರುವ ಅರೆಪಾಳ್ಯದ ಹೊನ್ನಹುಡೆ ಕಾಡಂಚಿನ ಗ್ರಾಮ ಅರೇಪಾಳ್ಯದಲ್ಲಿ ಹೊನ್ನ ಹುಡೆ ಮಹದೇಶ್ವರ ದೇವಸ್ಥಾನವಿದ್ದು, ಈ ದೇವಸ್ಥಾನವಿರುವ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂಬುದು ಅರಣ್ಯ ಇಲಾಖೆಯ ವಾದವಾಗಿದ್ದು, ಈ ಸಂಬಂಧ ದೇವಸ್ಥಾನವಿರುವ ಜಾಗವನ್ನು ವಶಪಡಿಸಿಕೊಳ್ಳಲು ಅರಣ್ಯ ಇಲಾಖೆ ಆಲೋಚಿಸಿತ್ತು.
ಈ ನಡುವೆ ದೇವಾಲಯದ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಜೆಸಿಬಿ ಸಹಾಯದಿಂದ ತಂತಿ ಬೇಲಿ ಹಾಕಲು ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅರೇಪಾಳ್ಯ ಗ್ರಾಮಸ್ಥರು ತಿಮ್ಮರಾಜಿಪುರ ರಾಜು ನೇತೃತ್ವದಲ್ಲಿ ಬೇಲಿ ಹಾಕುವ ಕಾರ್ಯವನ್ನು ತಡೆದು ತಡರಾತ್ರಿಯವರೆಗೂ ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖಾಧಿಕಾರಿಗಳು ಬೇಲಿ ಹಾಕುವ ಕಾರ್ಯವನ್ನು ಸ್ಥಗಿತಗೊಳಿಸಿದ್ದಲ್ಲದೆ, ಬೇಲಿಹಾಕಲು ತೋಡಿದ್ದ ಹಳ್ಳ ಮುಚ್ಚಿ ಹಿಂತಿರುಗಿದ್ದಾರೆ.