ಮಂಗಳೂರು: ದ.ಕ. ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅರ್ಹ ಕುಟುಂಬಗಳ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. ಬಿಜೆಪಿಯವರು ವಿನಾ ಕಾರಣ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆಯೇ ಹೊರತು, ಒಂದು ವೇಳೆ ಪಡಿತರ ಚೀಟಿಗಳ ಪರಿಷ್ಕರಣೆಯ ವೇಳೆ ಅಧಿಕಾರಿಗಳ ತಪ್ಪಿನಿಂದ ಏನೇ ಅಂತಹ ಸಮಸ್ಯೆ ಆಗಿದ್ದರೂ ಅದನ್ನು ಸರಕಾರ ಸರಿ ಮಾಡುವ ಕೆಲಸ ಮಾಡಲಿದೆ ಎಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಭರವಸೆ ನೀಡಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಪಡಿತರ ಚೀಟಿಗಳನ್ನು ಆರ್ಥಿಕವಾಗಿ ಹಿಂದುಳಿದ ಮಾನದಂಡದಂತೆ ನೀಡಬೇಕಾಗಿದ್ದು, ಅನರ್ಹರಿಗೆ ನೀಡಿರುವ ಕಾರ್ಡ್‌ಗಳನ್ನು ಮಾತ್ರವೇ ರದ್ದುಪಡಿಸಲಾಗುತ್ತದೆ ಎಂದರು.
ಜಿಲ್ಲೆಯ ನೂತನ ಸಂಸದ ಬ್ರಿಜೇಶ್ ಚೌಟ ಅವರು ಪರದೇಶದಲ್ಲಿರುವ ನಮ್ಮೂರಿನವರಿಂದ ಹೂಡಿಕೆ ಮಾಡಿಸುವ ಕಾರ್ಯವನ್ನು ನಾನು ಅಭಿನಂದಿಸುತ್ತೇನೆ. ಚುನಾವಣಾ ಪ್ರಣಾಳಿಕೆಯಲ್ಲಿ ನನ್ನ ಭರವಸೆಗಳಲ್ಲಿ ಇದೂ ಸೇರಿದ್ದು, ನೂತನ. ಸಂಸದರು ತಮ್ಮ ಹಳೆ ಚಾಳಿಯನ್ನು ಬಿಟ್ಟು ನಡೆಸುವ ಇಂತಹ ಕಾರ್ಯಗಳಿಗೆ ಪಕ್ಷಬೇಧ ಮರೆತು ಸಹಕರಿಸುತ್ತೇವೆ ಎಂದು ಪದ್ಮರಾಜ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಬೀರ್, ಹೇಮಂತ್ ಗರೋಡಿ, ಸಲೀಂ, ದುರ್ಗಾ ಪ್ರಸಾದ್, ಇಮ್ರಾನ್, ಹಬೀಬ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.