ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿರಿಯಾನಿ ಸೇವಿಸಿದ 40 ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ನಡೆದಿದೆ.
ಪಕ್ಷದ ಕಾರ್ಯಕರ್ತರು ಸದಸ್ಯರ ಸಾಮಾನ್ಯ ಸಭೆ ನಡೆಸಿ ಬಳಿಕ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಬಿರಿಯಾನಿ ಬಡಿಸಲಾಯಿತು. ಕೆಲವರು ಅದನ್ನು ತಮ್ಮ ಕುಟುಂಬಗಳೊಂದಿಗೆ ಹಂಚಿಕೊಳ್ಳಲು ಮನೆಗೆ ತೆಗೆದುಕೊಂಡು ಹೋಗಿದ್ದರು. ಬಿರಿಯಾನಿ ತಿಂದ ಸ್ವಲ್ಪ ಸಮಯದಲ್ಲೇ ನೂರಕ್ಕೂ ಹೆಚ್ಚು ಮಂದಿಗೆ ವಾಂತಿ, ವಾಕರಿಕೆ ಕಾಣಿಸಿಕೊಂಡಿದೆ. ಘಟನೆ ಹಿನ್ನೆಲೆಯಲ್ಲಿ ಅಸ್ವಸ್ಥರನ್ನು ವಿಲ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.
ಅಸ್ವಸ್ಥರಾದವರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಕೆಲವು ರೋಗಿಗಳನ್ನು ವಿರುದುನಗರ ಮತ್ತು ಕಲ್ಲಿಕುಡಿಯ ಆರೋಗ್ಯ ಕೇಂದ್ರಗಳಿಗೆ ಸಾಗಿಸಲು 10 ಆಂಬ್ಯುಲೆನ್ಸ್‌ಗಳನ್ನು ಕರೆಸಲಾಯಿತು. ಅಲ್ಲಿ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳು ಹಳಸಿದ ಆಹಾರವನ್ನು ಸೇವಿಸಿದ್ದರಿಂದ ವಿಷಪೂರಿತವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಘಟನೆಯ ಕುರಿತು ತಿರುಮಂಗಲಂ ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.