Ad

ಮುಂಗಾರು ಮಳೆ: ಜಿಲ್ಲೆಯಾದ್ಯಂತ ಶತಕದ ಗಡಿ ದಾಟಿದ ಟೊಮೆಟೊ ದರ

ಮುಂಗಾರು ಮಳೆ ಚುರುಕು ಪಡೆಯುತ್ತಿದ್ದಂತೆ ಜಿಲ್ಲೆಯಾದ್ಯಂತ ಎಲ್ಲ ತರಕಾರಿ ಪದಾರ್ಥಗಳ ಬೆಲೆ ಏಕಾಏಕಿ ಗಗನಕ್ಕೇರಿದೆ. ಅದರಲ್ಲೂ ಟೊಮೆಟೊ ಬೆಲೆ ಏಕಾಏಕಿ ಜಿಗಿದಿದೆ.

ಬೀದರ್: ಮುಂಗಾರು ಮಳೆ ಚುರುಕು ಪಡೆಯುತ್ತಿದ್ದಂತೆ ಜಿಲ್ಲೆಯಾದ್ಯಂತ ಎಲ್ಲ ತರಕಾರಿ ಪದಾರ್ಥಗಳ ಬೆಲೆ ಏಕಾಏಕಿ ಗಗನಕ್ಕೇರಿದೆ. ಅದರಲ್ಲೂ ಟೊಮೆಟೊ ಬೆಲೆ ಏಕಾಏಕಿ ಜಿಗಿದಿದೆ. ಎರಡು ವಾರಗಳ ಹಿಂದೆ ಪ್ರತಿ ಕೆ.ಜಿ ಟೊಮೆಟೊ ₹25ರಿಂದ ₹30ರ ಆಸುಪಾಸಿನಲ್ಲಿತ್ತು. ನಾಲ್ಕೈದು ದಿನಗಳ ಹಿಂದೆ ಮಧ್ಯಮ ಗಾತ್ರದ ಗುಣಮಟ್ಟದ ಟೊಮೆಟೊ ಪ್ರತಿ ಕೆ.ಜಿಗೆ ₹40ರಿಂದ ₹50 ಇತ್ತು.

Ad
300x250 2

ಈಗ ಒಂದೇ ಮಟ್ಟಿಗೆ ₹100ರಿಂದ ₹120ಕ್ಕೆ ಏರಿಕೆ ಕಂಡಿದೆ. ದಿನ ಕಳೆದಂತೆ ಇದು ಇನ್ನೂ ಹೆಚ್ಚಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಆದಕಾರಣ ಗ್ರಾಹಕರು ಟೊಮೆಟೊ ಸಹವಾಸವೇ ಬೇಡ ಎನ್ನುತ್ತಿದ್ದಾರೆ.

ಕಳೆದೊಂದು ತಿಂಗಳಿಂದ ಬೀನ್ಸ್‌ ದರ ಯಥಾಸ್ಥಿತಿಯಲ್ಲಿದೆ. ಪ್ರತಿ ಕೆ.ಜಿ ಬೀನ್ಸ್‌ ₹180ರಿಂದ ₹200ಕ್ಕೆ ಮಾರಾಟ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾದರೆ ಅಚ್ಚರಿ ಪಡಬೇಕಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಚವಳಿಕಾಯಿ, ಬೀನ್ಸ್‌, ದಪ್ಪ ಮೆಣಸಿನಕಾಯಿ, ಬೆಂಡೆಕಾಯಿ, ಕುಂಬಳಕಾಯಿ, ಬದನೆಕಾಯಿ, ಹೀರೆಕಾಯಿ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆ ಪ್ರತಿ ಕೆ.ಜಿಗೆ ₹80ರಿಂದ ₹100ರ ಆಸುಪಾಸಿನಲ್ಲಿದೆ. ಸೊಪ್ಪು ಕೂಡ ಹಿಂದೆ ಬಿದ್ದಿಲ್ಲ. ಮಧ್ಯಮ ಗಾತ್ರದ ಒಂದು ಕಟ್ಟು ಮೆಂತೆ ಪಲ್ಯ ₹40ಕ್ಕೆ ಮಾರಾಟವಾದರೆ, ಪಾಲಕ್‌, ಸಬ್ಬಕ್ಕಿ ₹30ರಿಂದ ₹40ರ ಆಸುಪಾಸಿನಲ್ಲಿದೆ.

ಏಕಾಏಕಿ ಬೆಲೆ ಹೆಚ್ಚಳ ಆಗಿರುವುದರಿಂದ ಗ್ರಾಹಕರು ಕಂಗಲಾಗಿದ್ದಾರೆ. ಎಷ್ಟೇ ಚೌಕಾಸಿ ಮಾಡಿದರೂ ವ್ಯಾಪಾರಿಗಳು ಐದು ರೂಪಾಯಿ ಸಹ ಕಡಿಮೆ ಮಾಡುತ್ತಿಲ್ಲ. ಈ ಬಗ್ಗೆ ಗ್ರಾಹಕರು ಪ್ರಶ್ನಿಸಿದರೆ, ‘ಮಾಲು ಬರುತ್ತಿಲ್ಲ. ಮಳೆ ಹೆಚ್ಚಾದರೆ ಇಷ್ಟು ಕೂಡ ಸಿಗುವುದಿಲ್ಲ. ನಿಮಗೆ ಇಷ್ಟವಿದ್ದರೆ ಖರೀದಿಸಿ, ಇಲ್ಲವಾದರೆ ಬಿಡಿ’ ಎಂದು ಖಂಡತುಂಡವಾಗಿ ಹೇಳುತ್ತಿದ್ದಾರೆ.

ಈ ಹಿಂದೆ ಮಾರುಕಟ್ಟೆಗೆ ಬಂದವರು ಕನಿಷ್ಠ ಎರಡ್ಮೂರು ದಿನಗಳಿಗೆ ಸಾಕಾಗುವಷ್ಟು ತರಕಾರಿ ಕೊಂಡೊಯ್ಯುತ್ತಿದ್ದರು. ಈಗ ಒಂದು ದಿನಕ್ಕೆ ಸಾಕು ಎನ್ನುತ್ತಿದ್ದಾರೆ. ಕೆಲವರಂತೂ ತರಕಾರಿ ಬೆಲೆ ಕೇಳಿ, ಬೆಲೆ ಕಡಿಮೆ ಆಗುವವರೆಗೆ ಬೇಳೆ, ಕಾಳು ಮಾಡಿಕೊಂಡು ಇದ್ದರಾಯ್ತು ಎಂಬ ಮನಸ್ಥಿತಿಗೆ ಬಂದಿದ್ದಾರೆ.

 

Ad
Ad
Nk Channel Final 21 09 2023
Ad