ಬೀದರ್: ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಸೋಲು-ಗೆಲುವು ಮತದಾರರ ನಿರ್ಣಯವಾಗಿರುತ್ತದೆ. ಹೀಗಾಗಿ ಮತದಾರರು ನೀಡಿದ ತೀರ್ಪಿಗೆ ನಾನು ಬದ್ಧನಾಗಿ ಸ್ವಾಗತಿಸುತ್ತೇನೆ ಎಂದು ಬೀದರ್ ಲೋಕಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹೇಳಿದರು.
ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಮೊದಲ ಬಾರಿಗೆ ಶನಿವಾರ ಸಂಜೆ ಫೇಸ್ಬುಕ್ ಲೈವ್‌ನಲ್ಲಿ ಮಾತನಾಡಿ, “ಕಳೆದ ಜೂ.4ರಂದು ಹೊರಬಿದ್ದಿರುವ ಬೀದರ್ ಲೋಕಸಭಾ ಕ್ಷೇತ್ರದ ಫಲಿತಾಂಶ ನಮ್ಮೆಲ್ಲರನ್ನು ಹುಸಿಗೊಳಿಸಿದೆ. ನಾವು ಅಪೇಕ್ಷಿಸಿದ ತದ್ವಿರುದ್ಧ ಫಲಿತಾಂಶ ಬಂದಿದೆ. ಆ ಫಲಿತಾಂಶದಿಂದ ಕ್ಷೇತ್ರದ ಲಕ್ಷಾಂತರ ಕಾರ್ಯಕರ್ತರು ಅಘಾತ, ದಿಗ್ಭ್ರಮೆಗೆ ಒಳಗಾಗಿ ನೊಂದ ಮನಸ್ಸಿನಿಂದ ನನ್ನನ್ನು ಕರೆ ಮಾಡಿದ್ದಾರೆ. ಫಲಿತಾಂಶ ಹೀಗೆ ಬರಲು ಕಾರಣಗಳೇನು ಎಂಬುದರ ಕುರಿತು ಚರ್ಚಿಸಿ ನನಗೆ ಧೈರ್ಯ ತುಂಬಿದ್ದಾರೆ” ಎಂದರು.
“ನಾನು ಕೇವಲ ಅಧಿಕಾರದ ಆಸೆಗಾಗಿ ಅಲ್ಲದೇ ಸಾಮಾಜಿಕ ಕಾರ್ಯ ಮಾಡಲು ಬಿಜೆಪಿಗೆ ಸೇರಿರುವುದು. ಒಬ್ಬ ಸಾಮಾನ್ಯ ಕಾರ್ಯಕರ್ತ, ರೈತನ ಮಗನಾದ ನನಗೆ ಎರಡು ಅವಧಿಗೆ ಅವಕಾಶ ಕೊಟ್ಟು, ಕೇಂದ್ರದಲ್ಲಿ ಸಚಿವ ಸ್ಥಾನ ಲಭಿಸಲು ಕ್ಷೇತ್ರದ ಜನ ಆಶೀರ್ವಾದ ಮಾಡಿದ್ದೀರಿ. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಕನಸುಗಳನ್ನು ಹೊತ್ತು ರೈತರ, ಬಡವರ, ಯುವಕರ, ಮಹಿಳೆಯರು ಸೇರಿದಂತೆ ಎಲ್ಲ ಜಾತಿ, ಧರ್ಮಗಳ ಭೇದ-ಭಾವ ಎನ್ನದೇ ಸರ್ವರ ಏಳಿಗೆಗಾಗಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿರುವುದು ತೃಪ್ತಿಯಿದೆ” ಎಂದು ಹೇಳಿದರು.
ನಾಳೆ (ಜೂ.9) ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಆ ಕ್ಷಣಕ್ಕಾಗಿ ಕಾತುರರಾಗಿದ್ದೇವೆ. ಮಾಜಿ ಕೇಂದ್ರ ಸಚಿವನಾಗಿದ್ದರೂ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಸಾಧ್ಯವಾದಷ್ಟು ತಂದು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೀದರ್ ಜಿಲ್ಲೆಯಲ್ಲಿ ಎಲ್ಲರ ಒಗ್ಗಟ್ಟಿನಿಂದ ವಿಪಕ್ಷ ಸಂಘಟನೆ ಬಲಪಡಿಸಿ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಪ್ರತಿಭಟಿಸಿ ಜನ ಜಾಗೃತಿ ಮಾಡೋಣ. ಜನರಿಗೆ ರಾಜ್ಯ ಸರ್ಕಾರದ ಅನ್ಯಾಯವನ್ನು ತಡೆದು ನ್ಯಾಯ ಒದಗಿಸುವ ಕರ್ತವ್ಯ ನಾವೆಲ್ಲರೂ ನಿಭಾಯಿಸುವ ಮೂಲಕ ಸಾಮಾಜಿಕ ಸೇವೆ ಮಾಡೋಣ. ಮುಂದಿನ ಚುನಾವಣೆಯಲ್ಲಿ ಪಕ್ಷ ಮತ್ತೆ ಗೆದ್ದು ಬರುವ ರೀತಿಯಲ್ಲಿ ಪ್ರಾಮಾಣಿಕ ಸೇವೆ ಮಾಡಲು ಸಿದ್ಧರಾಗೋಣ” ಎಂದರು.
ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೆಲಸ ಇರುವ ಕಾರಣ ಇನ್ನು ಕೆಲವು ದಿನ ದೆಹಲಿಯಲ್ಲೇ ಉಳಿದು ಬೀದರ್‌ಗೆ ಬರುವೆ, ನಿಮ್ಮೆಲ್ಲರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಸಿದ್ಧನಿದ್ದೇನೆ” ಎಂದು ಮಾಜಿ ಕೇಂದ್ರ ಸಚಿವ ಖೂಬಾ ಹೇಳಿದರು.