Bengaluru 23°C
Ad

ವಿದ್ಯಾರ್ಥಿಗಳ ಕಲಿಕೆಯ ಲವಲವಿಕೆ ಹೆಚ್ಚಿಸಬೇಕು: ಚಂದ್ರಕಾಂತ ಶಹಾಬಾದಕರ

ಜೂನ್‌ 1ರಿಂದ ಪಿಯು ತರಗತಿಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳ ಕಲಿಕೆಯ ಲವಲವಿಕೆ ಹೆಚ್ಚಿಸಬೇಕು' ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಚಂದ್ರಕಾಂತ ಶಹಾಬಾದಕರ ಸಲಹೆ ನೀಡಿದರು.

ಬೀದರ್: ‘ಜೂನ್‌ 1ರಿಂದ ಪಿಯು ತರಗತಿಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳ ಕಲಿಕೆಯ ಲವಲವಿಕೆ ಹೆಚ್ಚಿಸಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಚಂದ್ರಕಾಂತ ಶಹಾಬಾದಕರ ಸಲಹೆ ನೀಡಿದರು.

ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲ ಕಾಲೇಜಿನವರು ಅತಿ ವಿಜೃಂಭಣೆಯಿಂದ ತರಗತಿಗಳನ್ನು ಆರಂಭಿಸಿ, ಮಕ್ಕಳ ಕಲಿಕೆಯ ಲವಲವಿಕೆ ಹೆಚ್ಚಿಸಬೇಕು. ಕಾಲೇಜಿನ ಸಿಬ್ಬಂದಿ ವರ್ಗ ‘ದಾಖಲಾತಿ ಆಂದೋಲನ’ದ ಮೂಲಕ ದಾಖಲಾತಿ ಸಂಖ್ಯೆ ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.

ಈಚೆಗೆ ಪಾಲಕರು- ಮಕ್ಕಳ ಒಲವು ಅನುದಾನರಹಿತ ಕಾಲೇಜುಗಳ ಕಡೆಗೆ ವಾಲುತ್ತಿದೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ. ಸರ್ಕಾರಿ ಮತ್ತು ಅನುದಾನಿತ ಕಾಲೇಜಿನವರು ಸಹ ವಿನೂತನ ಮಾದರಿ, ತಂತ್ರಗಾರಿಕೆ ಮೂಲಕ ಮಕ್ಕಳನ್ನು ಆಕರ್ಷಿಸಬೇಕು. ಪ್ರಸ್ತುತ ಸಾಲಿನ ನೂತನ ಅರ್ಜಿ 13 ಭರ್ತಿ ಮಾಡಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಬೇಕು. ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಜೀವನದಲ್ಲಿ ಪರಿವರ್ತನೆ ತರಬೇಕು ಎಂದು ಹೇಳಿದರು.

2024ರ ದ್ವಿತೀಯ ಪಿಯು ಪರೀಕ್ಷೆ-1ರ ಬೀದರ್‌ ಜಿಲ್ಲೆಯ ಫಲಿತಾಂಶ ಶೇ 81.69ರಷ್ಟು ಬಂದಿದೆ. ಕಲ್ಯಾಣ-ಕರ್ನಾಟಕ ಭಾಗದಲ್ಲಿ ನಂಬರ ಒನ್ ಸ್ಥಾನದಲ್ಲಿದೆ. ಪ್ರಸ್ತುತ 2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಸಿಂಗಲ್ ಡಿಜಿಟ್‌ನಲ್ಲಿ ತರುವ ಪ್ರಯತ್ನ ಎಲ್ಲರಿಂದ ನಡೆಯಬೇಕು ಎಂದರು.

ಕಚೇರಿ ಸಿಬ್ಬಂದಿ ಕ್ಯಾಶಬುಕ್ ಅಪಡೇಟ್‌ ಆಗಿ ಇಡಬೇಕು. ಬೋಧಕ ಸಿಬ್ಬಂದಿ ಲೆಸನ್‌ ನೋಟ್ಸ್, ವಾರ್ಷಿಕ ಯೋಜನೆ, ಮಕ್ಕಳ ಹಾಜರಾತಿ ಸೇರಿದಂತೆ ಇತರೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಡಬೇಕು. ಇಲಾಖೆಯವರು ಕೇಳಿದ ಮಾಹಿತಿ ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು. ಕಾಲೇಜಿನ ವೇಳಾಪಟ್ಟಿಯಂತೆ ಎಲ್ಲ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಶೇ.40ಕ್ಕಿಂತ ಕಡಿಮೆ ಫಲಿತಾಂಶ ಇರುವ ಕಾಲೇಜುಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ಪರೀಕ್ಷೆ-1 ಮತ್ತು ಪರೀಕ್ಷೆ-2 ರ ಮೌಲ್ಯಮಾಪನ ಮುಗಿದು ಫಲಿತಾಂಶ ಕೂಡ ಪ್ರಕಟವಾಗಿದೆ. ಪರೀಕ್ಷೆ-3 ಬರೆಯುವ ಮಕ್ಕಳ ಮಾಹಿತಿ ಸ್ಯಾಟ್ಸ್ ಪೋರ್ಟಲ್‌ನಲ್ಲಿ ದಾಖಲಿಸಬೇಕು ಎಂದು ಹೇಳಿದರು.

ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಓಂಕಾರ ಸೂರ್ಯವಂಶಿ, ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ, ನೋಡಲ್ ಅಧಿಕಾರಿ ಚಂದ್ರಕಾಂತ ಗಂಗಶೆಟ್ಟಿ ಹಾಜರಿದ್ದರು.

Ad
Ad
Nk Channel Final 21 09 2023
Ad