Bengaluru 22°C
Ad

ಸಚಿವ ನಾಗೇಂದ್ರ ರಾಜೀನಾಮೆ ಕೊಡಲಿ: ಮುರುಗೇಶ ನಿರಾಣಿ ಆಗ್ರಹ

'ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ಕೊಡಬೇಕು' ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಆಗ್ರಹಿಸಿದರು.

ಬೀದರ್: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ಕೊಡಬೇಕು’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಆಗ್ರಹಿಸಿದರು.

ಈ ಹಿಂದೆ ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಇದೇ ಕಾಂಗ್ರೆಸ್‌ನವರು ಅಂದು ಸಚಿವರಾಗಿದ್ದ ಕೆ.ಎಸ್‌.ಈಶ್ವರಪ್ಪನವರ ರಾಜೀನಾಮೆಗೆ ಆಗ್ರಹಿಸಿದ್ದರು. ಈಶ್ವರಪ್ಪನವರು ತಕ್ಷಣವೇ ರಾಜೀನಾಮೆ ಕೊಟ್ಟಿದ್ದರು. ಅದೇ ರೀತಿ ನಾಗೇಂದ್ರ ಕೂಡ ನಡೆದುಕೊಳ್ಳಬೇಕು. ಇಲ್ಲವಾದರೆ ಬಿಜೆಪಿಯಿಂದ ವಿಧಾನಸಭೆಯ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲಾಗುವುದು ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಂದ್ರಶೇಖರನ್‌ ಅವರು ಡೆತ್‌ ನೋಟ್‌ನಲ್ಲಿ ಮಂತ್ರಿ ಸೇರಿದಂತೆ ಹಲವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಪ್ರಕರಣವನ್ನು ಹೈಕೋರ್ಟ್‌ ನ್ಯಾಯಮೂರ್ತಿ ಅಥವಾ ಉನ್ನತ ಮಟ್ಟದ ತಂಡದಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ರೈತರಿಗೆ ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ ಪೂರೈಸಬೇಕು: ಈ ಸಲ ಉತ್ತಮ ಮಳೆಯ ನಿರೀಕ್ಷೆ ಇದೆ. ಸಾಧ್ಯವಾದಷ್ಟು ಬೇಗ ರೈತರಿಗೆ ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ ಪೂರೈಸಬೇಕು. ಅತಿ ಹೆಚ್ಚಿನ ಬೆಲೆಗೆ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ರಾಜ್ಯ ಸರ್ಕಾರ ಇದಕ್ಕೆ ಆಸ್ಪದ ಕೊಡಬಾರದು. ತಜ್ಞರಿಂದ ಪರೀಕ್ಷೆ ನಡೆಸಿ, ಆನಂತರ ರೈತರಿಗೆ ಬೀಜ ವಿತರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿದ್ದ ಯೋಜನೆಗಳು ಮುಂದುವರೆದಿವೆ. ಸರ್ಕಾರದ ಕಾರ್ಯವೈಖರಿ ಬಗ್ಗೆ ಬಿಜೆಪಿ, ಜೆಡಿಎಸ್‌ ಅಷ್ಟೇ ಅಲ್ಲ, ಸ್ವತಃ ಕಾಂಗ್ರೆಸ್‌ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ, ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮುಖಂಡರಾದ ರಘುನಾಥರಾವ್‌ ಮಲ್ಕಾಪುರೆ, ಬಾಬುವಾಲಿ, ರೇವಣಸಿದ್ದಪ್ಪ ಜಲಾದೆ ಹಾಜರಿದ್ದರು.

Ad
Ad
Nk Channel Final 21 09 2023
Ad